ಮಹಾರಾಷ್ಟ್ರ: ಕರ್ನಾಟಕ ಕರಾವಳಿಯ ಪೂರ್ವ- ಮಧ್ಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತವು ರೂಪುಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಮೇ 21 ಮತ್ತು 24 ರ ನಡುವೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬೈನ ಪ್ರಾದೇಶಿಕ ಹವಾಮಾನ ಕೇಂದ್ರವು ಮಂಗಳವಾರ ಸಂಜೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಮೇ 22 ರ ಸುಮಾರಿಗೆ ಅದೇ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ನಂತರ ಅದು ಉತ್ತರಕ್ಕೆ ಚಲಿಸಬಹುದು ಮತ್ತು ಇನ್ನಷ್ಟು ತೀವ್ರಗೊಳ್ಳಬಹುದು ಎಂದು ತಿಳಿಸಿದೆ.
ಚಂಡಮಾರುತದ ಪ್ರಭಾವದಿಂದಾಗಿ ಮೇ 21 ಮತ್ತು ಮೇ 24 ರ ನಡುವೆ ಮಹಾರಾಷ್ಟ್ರದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆಯ ಅಧಿಕಾರಿ ಶುಭಾಂಗಿ ಭೂಟೆ ಹೇಳಿದ್ದಾರೆ. ದಕ್ಷಿಣ ಕೊಂಕಣ, ದಕ್ಷಿಣ ಮಧ್ಯ ಮಹಾರಾಷ್ಟ್ರ ಮತ್ತು ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳ ಮೇಲೆ ಹವಾಮಾನ ವ್ಯವಸ್ಥೆಯು ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಮಹಾರಾಷ್ಟ್ರದ ಮರಾಠವಾಡಾದಲ್ಲಿ ಮಿಂಚಿನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಬೋಲ್ಟ್ ಅರೆಸ್ಟರ್ ಗಳನ್ನು ಅಳವಡಿಸದೇ ಇರುವುದರಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.