ಬೆಂಗಳೂರು: ನಗರದಲ್ಲಿ ಪೂರ್ವ ಮುಂಗಾರಿನ ಅಬ್ಬರ ಮೂರನೇ ದಿನವೂ ಮುಂದುವರೆದಿದೆ. ಮಂಗಳವಾರ ನಸುಕಿನ ಜಾವ ಕೆಲಕಾಲ ಸುರಿದ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹೊರಮಾವು ಬಳಿಯ ಸಾಯಿ ಲೇಔಟ್, ಮಾಗಡಿ ರಸ್ತೆಯ ಕೆ.ಪಿ ಅಗ್ರಹಾರ ಸೇರಿದಂತೆ ಹಲವು ಏರಿಯಾಗಳು ಜಲಾವೃತವಾಗಿದ್ದು, ಸ್ಥಳೀಯ ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ. ಮಳೆ ನಿಂತರೂ ಸಹ ಸಾಯಿ ಲೇಔಟ್‌ನಲ್ಲಿ ಆವರಿಸಿರುವ ನೀರಿನ ಪ್ರಮಾಣ ತಗ್ಗಿಲ್ಲ. ಸೋಮವಾರದಿಂದಲೂ ಸಹ ಅಗ್ನಿಶಾಮಕದಳ, ರಾಜ್ಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಪಂಪ್ ಬಳಸಿ ಮಳೆ ನೀರನ್ನ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಏರಿಯಾದ ಬಹುತೇಕ ಜನ ಮನೆಗಳನ್ನು ಖಾಲಿ ಮಾಡಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಸಿಲ್ಕ್ ಬೋರ್ಡ್, ಮಡಿವಾಳ, ಬೊಮ್ಮನಹಳ್ಳಿ ಭಾಗದಲ್ಲಿ ಹಲವೆಡೆ ರಸ್ತೆಗಳ ಮೇಲೆ ನೀರು ನಿಂತಿರುವುದು ವಾಹನ ಸವಾರರ ಪರದಾಟಕ್ಕೆ ಕಾರಣವಾಗಿದೆ. ಮಡಿವಾಳ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿದ್ದು, ಅದರ ನಡುವೆಯೇ ದ್ವಿಚಕ್ರ ವಾಹನ ಸವಾರರು ಸಾಗುವಂತಾಗಿದೆ. ಮಳೆ ನೀರು ರಸ್ತೆಯಲ್ಲಿ ತುಂಬಿಕೊಂಡ ಪರಿಣಾಮ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ನಿಂದ ರೂಪೇನ ಅಗ್ರಹಾರದವರೆಗಿನ ರಸ್ತೆ ಹಾಗೂ ಎಲಿವೇಟೆಡ್ ಫ್ಲೈಓವರ್‌ನಲ್ಲಿ ವಾಹನಗಳ ಸಂಚಾರವನ್ನು ಕೆಲಕಾಲ ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಅಂತೆಯೇ ವಾಹನ ಸವಾರರು ಬದಲಿ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ನೀರು ತೆರವುಗೊಳಿಸಿದ ನಂತರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಮಳೆಯಿಂದಾಗಿ ಸಂಪಂಗಿ ರಾಮನಗರದಲ್ಲಿರುವ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ನೀರು ನುಗ್ಗಿದೆ. ಹೋರಾಂಗಣ ಕ್ರೀಡಾಂಗಣ ಹಾಗೂ ಕಚೇರಿಗಳತ್ತಲೂ ನೀರು ನುಗ್ಗಿದ್ದು, ಪಂಪ್ ಬಳಸಿ ನೀರು ತೆರವುಗೊಳಿಸಲಾಗುತ್ತಿದೆ. ಭಾರೀ ಮಳೆಯ ನಿರೀಕ್ಷೆಯಿರುವುದರಿಂದ ಇಂದೂ ಸಹ ಹಲವು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿವೆ. ಕಚೇರಿಗೆ ಬರಲು ಸಾಧ್ಯವಾದರೆ ಮಾತ್ರ ಬರುವಂತೆ, ಇಲ್ಲವಾದರೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಕೆಲ ಕಂಪನಿಗಳು ಸೂಚನೆ ನೀಡಿವೆ.