image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗರ್ಭಿಣಿಯರಿಗೆ ಕೊಡುವ ಪೌಷ್ಟಿಕ ಆಹಾರ ಗುಣಮಟ್ಟದಲ್ಲ. ಒಮ್ಮೆ ಸಚಿವರು, ಅಧಿಕಾರಿಗಳು ಊಟ ಮಾಡಿ..!

ಗರ್ಭಿಣಿಯರಿಗೆ ಕೊಡುವ ಪೌಷ್ಟಿಕ ಆಹಾರ ಗುಣಮಟ್ಟದಲ್ಲ. ಒಮ್ಮೆ ಸಚಿವರು, ಅಧಿಕಾರಿಗಳು ಊಟ ಮಾಡಿ..!

ಉತ್ತರ ಕನ್ನಡ : "ಗರ್ಭಿಣಿಯರಿಗೆ ಕೊಡುವ ಪೌಷ್ಟಿಕ ಆಹಾರ ಗುಣಮಟ್ಟದಲ್ಲ. ಒಮ್ಮೆ ಸಚಿವರು, ಅಧಿಕಾರಿಗಳು ಊಟ ಮಾಡಿ ನೋಡಬೇಕು" ಎಂದು ಜನಸ್ಪಂದನ ಸಭೆಯಲ್ಲಿ ವ್ಯಕ್ತಿಯೋರ್ವರು ಮನವಿ ಮಾಡಿದರು. ಭಟ್ಕಳದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವ್ಯಕ್ತಿ, "ಗರ್ಭಿಣಿಯರಿಗೆ ಕೊಡುವ ಆಹಾರ ಗುಣಮಟ್ಟವಾಗಿಲ್ಲ, ಅದು ಕಳಪೆಯಾಗಿದೆ. ಈ ಬಗ್ಗೆ ಪರಿಶೀಲಿಸಬೇಕು. ಅಲ್ಲದೆ, ಎಂಡೋಸಲ್ಫಾನ್ ಪೀಡಿತರಿಗೆ ಔಷಧಿ ಕೊಡುತ್ತಿಲ್ಲ. ನಮಗೆ ಸರ್ಕಾರದಿಂದ ಇತರೆ ಸೌಲಭ್ಯ ಬೇಡ. ನಮ್ಮ ಮನೆಯಲ್ಲಿ ಇರುವ ಎಂಡೋಸಲ್ಫಾನ್ ಪೀಡಿತರಿಗೆ ಸೌಲಭ್ಯ ಒದಗಿಸಿ" ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, "ಜನಸಾಮಾನ್ಯರು ತಮ್ಮ ಸಮಸ್ಯೆಗಳ ಬಗ್ಗೆ ಪದೇ ಪದೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಬೇಡಿ. ಅವರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸಿ. ಸರ್ಕಾರದ ಸೌಲಭ್ಯಗಳನ್ನು ಮಂಜೂರು ಮಾಡಬೇಕು. ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳನ್ನೂ ಅಧಿಕಾರಿಗಳು ಬಗೆಹರಿಸಬೇಕು. ಅವರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ನಾನು ಕೂಡ ಕಾರ್ಯ ನಿರ್ವಹಿಸುತ್ತೇನೆ. ಜನರು ಪರಿಹಾರಕ್ಕಾಗಿ ಕಚೇರಿಗಳಿಗೆ ಬಂದರೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಸ್ಪಂದಿಸಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.

"ಜನಸ್ಪಂದನ ಕೇವಲ ಕಾಟಾಚಾರದ ಕಾರ್ಯಕ್ರಮವಲ್ಲ. ಮಧ್ಯಸ್ಥರುಗಳ ಹಾವಳಿ ತಪ್ಪಿಸಿ, ಸಾರ್ವಜನಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಇಲ್ಲಿ ಸ್ವೀಕೃತವಾಗುವ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಿ, ಆದ್ಯತೆಯಲ್ಲಿ ಸೌಲಭ್ಯ ಒದಗಿಸಬೇಕು. ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ 104 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ'' ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

"ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸಿ, ಅವರಿಗೆ ವಿಶೇಷ ಶಿಬಿರಗಳನ್ನು ಮಾಡಿ ಚಿಕಿತ್ಸೆ ನೀಡಲಾಗಿದೆ. ಸರ್ಕಾರದಿಂದ ಒಂದು ಸಂಸ್ಥೆಗೆ ಔಷಧ, ಆಹಾರ ಕಿಟ್​ಗಳನ್ನು ವಿತರಿಸಲು ಸೂಚಿಸಲಾಗಿದೆ. ಒಂದು ವೇಳೆ, ಆ ಸಂಸ್ಥೆ ಸಂತ್ರಸ್ತರಿಗೆ ಸರಿಯಾಗಿ ಔಷಧ ಮತ್ತು ಆಹಾರ ಕಿಟ್ ವಿತರಿಸದಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ 4 ಸಾವಿರ ರೂ. ಮಾಶಾಸನವು ಸಮಯಕ್ಕೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು'' ಎಂದು ಅಧಿಕಾರಿಗಳಿಗೆ ತಿಳಿಸಿದರು.

 

Category
ಕರಾವಳಿ ತರಂಗಿಣಿ