image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ :ಜನ ಜೀವನ ಅಸ್ತವ್ಯಸ್ತ

ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ :ಜನ ಜೀವನ ಅಸ್ತವ್ಯಸ್ತ

ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸಂಡೂರು ತಾಲೂಕಿನಲ್ಲಿ ಬುಧವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಠಿಯಾಗಿದೆ. ಸಂಡೂರು ತಾಲೂಕಿನ ಯಶವಂತನಗರದ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಕೂಡ್ಲಿಗಿ, ಕೊಟ್ಟೂರು, ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅಂಡರ್‌ಪಾಸ್ ಆಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸವಾರರು ಕಷ್ಟಪಡುತ್ತಿದ್ದರು. ನೀರು ತುಂಬಿಕೊಂಡಿರುವ ಅಂಡರ್ ಪಾಸ್‌ನಲ್ಲೇ ವಾಹನ ಸವಾರರು ರಿಸ್ಕ್ ತೆಗೆದುಕೊಂಡು ಸರ್ಕಸ್ ಮಾಡುತ್ತಾ ಸಾಗುತ್ತಿದ್ದರು.

ಭಾರೀ ಮಳೆಗೆ ಸಂಡೂರಿನ ನಾರಿ ಹಳ್ಳ ಸೇರಿದಂತೆ ವಿವಿಧ ಜಲಮೂಲಗಳು ಉಕ್ಕಿ ಹರಿದಿವೆ. ಇದರಲ್ಲಿ ಎಮ್ಮೆಯೊಂದು ಈ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಆದರೆ ಅದೃಷ್ಟವಶಾತ್ ಎಮ್ಮೆ ಸ್ವಲ್ಪ ದೂರ ನೀರಿನಲ್ಲಿ ಕೊಚ್ಚಿ ಹೋಗಿ ನಂತರ ದಡ ಸೇರಿದೆ. ಬಳ್ಳಾರಿ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಳ್ಳಾರಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಕೆಸರುಗದ್ದೆಯಂತಾಗಿದೆ. ಎಪಿಎಂಸಿ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಸಂಚರಿಸುವುದೇ ಒಂದು ರೀತಿಯ ಸರ್ಕಸ್‌ನಂತಾಗಿದೆ.

ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳು ಹಾಗೂ ಆಂಧ್ರದ ಗಡಿ ಜಿಲ್ಲೆಗಳಿಂದಲೂ ಬಳ್ಳಾರಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ತರಕಾರಿ ಮಾರಾಟ ಮಾಡಲು ರೈತರು ಬರುತ್ತಿದ್ದಾರೆ. ಆದರೆ ಇಲ್ಲಿನ ಮಾರುಕಟ್ಟೆ ಕೆಸರುಗದ್ದೆ ಆಗಿರುವುದರಿಂದ ತರಕಾರಿ ಮಾರಾಟ ಮಾಡಲು ತೊಂದರೆಯಾಗಿದೆ. ವರ್ತಕರಿಂದ ಶುಲ್ಕ ಪಡೆಯುವ ಎಪಿಎಂಸಿ, ಕನಿಷ್ಠ ತರಕಾರಿ ಮಾರಾಟ ಮಾಡಲು ಸಮರ್ಪಕ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Category
ಕರಾವಳಿ ತರಂಗಿಣಿ