ರಾಮನಗರ: ಬಾಲಕಿಯ ಶವ ರೈಲ್ವೇ ಹಳಿ ಬಳಿ ಪತ್ತೆಯಾದ ಪ್ರಕರಣದಲ್ಲಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಮೃತ ಬಾಲಕಿಯ ಕುಟುಂಬಸ್ಥರಿಗೆ ಬುಧವಾರ ಸಾಂತ್ವನ ಹೇಳಿದ ಅವರು, ಜಿಲ್ಲಾಡಳಿತದ ಪರವಾಗಿ ₹4,12,500 ಹಾಗೂ ಪಂಚಾಯ್ತಿ ವತಿಯಿಂದ ₹50,000 ಪರಿಹಾರ ಚೆಕ್ ವಿತರಿಸಿದರು.
"ಈ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಯಾರ ಒತ್ತಡಕ್ಕೂ ಒಳಗಾಗದೆ ನ್ಯಾಯಪರ, ನಿಷ್ಠುರ ತನಿಖೆ ನಡೆಯಲಿದೆ. ಯಾರ ಮೇಲಾದರೂ ಅನುಮಾನವಿದೆಯೇ ಎಂದು ಬಾಲಕಿಯ ಕುಟುಂಬಸ್ಥರ ಬಳಿ ಕೇಳಿದೆ. ಅವರು ಇಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ಮಾಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ಎಲ್ಲಾ ಆಯಾಮದಲ್ಲಿಯೂ ಪೊಲೀಸರು ತನಿಖೆ ಮಾಡಲಿದ್ದಾರೆ. ದ್ವೇಷದಿಂದ ನಡೆದಿದೆಯೇ? ಅತ್ಯಾಚಾರವಾಗಿದೆಯೇ? ಏನಾದರೂ ಬೇರೆ ಕಾರಣ ಇದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ನಾವು ನ್ಯಾಯ ಒದಗಿಸುತ್ತೇವೆ" ಎಂದರು.
"ಬಾಲಕಿ ಹಾಸ್ಟೆಲ್ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ರಜೆಗೆಂದು ಊರಿಗೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಾತುಬಾರದ, ಕಿವಿ ಕೇಳದಿದ್ದರೂ ಚುರುಕಾಗಿದ್ದ ಬಾಲಕಿ ಎಂದು ಎಲ್ಲರೂ ಹೇಳುತ್ತಿದ್ದಾರೆ" ಎಂದ ಡಿಕೆಶಿ ಹೇಳಿದರು.