ಬಿಹಾರ : ಬಿಹಾರದ ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ತೆರಳುತ್ತಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಡೆದಿದ್ದಾರೆ. ಬಿಹಾರ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ, ಹಿಂದುಳಿದವರು ಮತ್ತು ಸಂವಿಧಾನದ ವಿರುದ್ಧವಿದೆ ಎಂದರು.
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳೊಂದಿಗೆ 'ಶಿಕ್ಷಾ ನ್ಯಾಯ' ಸಂವಾದ ನಡೆಸಲು ಮುಂದಾಗಿದ್ದು, ದರ್ಬಾಂಗ್ನ ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಇಂದು ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಿತ್ತು. ಆದರೆ, ಜಿಲ್ಲಾಡಳಿತ ಹಾಸ್ಟೆಲ್ನಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ ಬುಧವಾರ ರಾತ್ರಿ ಟೌನ್ ಹಾಲ್ಗೆ ಸ್ಥಳಾಂತರಿಸಿತ್ತು. ಆದರೆ, ರಾಹುಲ್ ಗಾಂಧಿ ಈ ಮುಂಚೆ ನಿಗದಿಯಾದ ಸ್ಥಳದಲ್ಲೇ ಭಾಷಣ ನಡೆಸಲು ಮುಂದಾಗಿದ್ದು, ಪೊಲೀಸರು ತಡೆದಿದ್ದಾರೆ.
"ಬಿಹಾರ ಸರ್ಕಾರ ನನ್ನನ್ನು ತಡೆಯುವ ಯತ್ನ ನಡೆಸಿದೆ. ಆದರೆ, ಅವರು ನನ್ನನ್ನು ತಡೆಯಲು ಸಾಧ್ಯವಿಲ್ಲ. ನಿಮ್ಮ ಶಕ್ತಿ (ಹಿಂದುಳಿದ ಸಮುದಾಯ) ನನ್ನನ್ನು ನೋಡುತ್ತಿದೆ. ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಜಾತಿ ಜನಗಣತಿಯನ್ನು ಘೋಷಿಸಿದರು. ಆದರೆ, ಅವರ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಹಿಂದುಳಿದವರ ವಿರುದ್ಧ ಇದೆ. ಇದು ಅದಾನಿ-ಅಂಬಾನಿ ಸರ್ಕಾರ" ಎಂದು ರಾಹುಲ್ ಟೀಕಿಸಿದರು.
"ಬಿಹಾರದಲ್ಲಿನ ಎನ್‌ಡಿಎ ಡಬಲ್ ಇಂಜಿನ್ ದೋಕೇಬಾಜ್ ಸರ್ಕಾರ ಅಂಬೇಡ್ಕರ್ ಹಾಸ್ಟೆಲ್ನಲ್ಲಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳೊಂದಿಗಿನ ಸಂವಾದವನ್ನು ತಡೆದಿದೆ. ಮಾತುಕತೆ ನಡೆಸುವುದು ಯಾವಾಗ ಅಪರಾಧವಾಯಿತು?, ನಿತೀಶ್ಜಿ ನನ್ನ ಬಗ್ಗೆ ನಿಮಗೆ ಭಯವೇಕೆ? ರಾಜ್ಯದಲ್ಲಿನ ಸಾಮಾಜಿಕ ನ್ಯಾಯ ಮತ್ತು ಶಿಕ್ಷಣವನ್ನು ನನ್ನಿಂದ ಮರೆಮಾಚಬೇಕು ಎಂದಿದ್ದೀರಾ" ಎಂದು ಅವರು ಪ್ರಶ್ನಿಸಿದರು.
"ಭಾರತ ಪ್ರಜಾಪ್ರಭುತ್ವ ದೇಶ. ಸಂವಿಧಾನದ ಆಧಾರದ ಮೇಲೆ ಸರ್ಕಾರ ನಡೆಸಲಾಗುತ್ತದೆಯೇ ಹೊರತು ನಿರಂಕುಶಾಧಿಕಾರದಿಂದಲ್ಲ. ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಪರವಾಗಿ ಧ್ವನಿ ಎತ್ತುವುದನ್ನು ಯಾರೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ" ಎಂದರು. ಅಂಬೇಡ್ಕರ್ ಹಾಸ್ಟೆಲ್ಗೆ ರಾಹುಲ್ ಗಾಂಧಿ ಪ್ರವೇಶಕ್ಕೆ ನಿರಾಕರಿಸಿರುವ ದರ್ಭಾಂಗ್ ಜಿಲ್ಲಾಡಳಿತ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ಬಿಹಾರ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.