image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮತ್ತೆ ಮುಂದುವರೆದ ರಾಜ್ಯ ಗುತ್ತಿಗೆದಾರರ ಬಾಕಿ ಬಿಲ್​ ಸಮಸ್ಯೆ

ಮತ್ತೆ ಮುಂದುವರೆದ ರಾಜ್ಯ ಗುತ್ತಿಗೆದಾರರ ಬಾಕಿ ಬಿಲ್​ ಸಮಸ್ಯೆ

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಆಡಳಿತದಲ್ಲೂ ರಾಜ್ಯ ಗುತ್ತಿಗೆದಾರರ ಬಾಕಿ ಬಿಲ್​ ಸಮಸ್ಯೆ ಇನ್ನೂ ಹಾಗೆಯೇ ಮುಂದುವರೆದಿದೆ. ಸಾವಿರಾರು ಕೋಟಿ ರೂ. ಕಾಮಗಾರಿ ಬಿಲ್ ಬಾಕಿ ಉಳಿದುಕೊಂಡಿದ್ದು, ರಾಜ್ಯ ಗುತ್ತಿಗೆದಾರರು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಎಲ್ಲಾ ಇಲಾಖೆಗಳಿಂದ ಸುಮಾರು 31,000 ಕೋಟಿ ರೂ. ಗುತ್ತಿಗೆ ಕಾಮಗಾರಿಗಳ ಬಿಲ್ ಬಾಕಿ ಉಳಿದುಕೊಂಡಿದೆ.

ಸಾವಿರಾರು ಕೋಟಿ ಕಾಮಗಾರಿಗಳ ಬಿಲ್ ಪಾವತಿಸಲು ಸರ್ಕಾರಕ್ಕೆ ಕಷ್ಟಸಾಧ್ಯವಾಗುತ್ತಿದೆ. ಗುತ್ತಿಗೆದಾರರ ಸಂಘವೂ ಬಿಲ್ ಪಾವತಿಗೆ ಇಲಾಖಾವಾರು ಅಧಿಕಾರಿಗಳು ಕಮಿಷನ್ ಕೇಳುತ್ತಿರುವ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದಾರೆ. ಇಲಾಖೆ ಸಚಿವರಿಗೆ ಬಿಲ್ ಪಾವತಿಗೆ ಮನವಿ ಸಲ್ಲಿಸಿದರೂ ನಿರೀಕ್ಷಿತ ಫಲ ನೀಡುತ್ತಿಲ್ಲ.ಬಿಜೆಪಿ ಅವಧಿಯಲ್ಲಿ ಸಾವಿರಾರು ಕೋಟಿ ಕಾಮಗಾರಿಗಳ ಬಿಲ್ ಬಾಕಿ ಉಳಿದುಕೊಂಡಿದೆ ಹಾಗೂ 40% ಕಮಿಷನ್ ಎಂಬ ಆರೋಪಗಳು ದೊಡ್ಡ ಸದ್ದು ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಈ ದೊಡ್ಡ ಪ್ರಮಾಣದ ಬಾಕಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹಂತ, ಹಂತವಾಗಿ ಬಿಲ್ ಪಾವತಿ ಮಾಡುವುದಾಗಿ ಹೇಳುತ್ತಿದ್ದರೂ ಬಾಕಿ ಪ್ರಮಾಣ ಮಾತ್ರ ಏರುತ್ತಲೇ ಇದೆ ಎಂದು ಮತ್ತೊಮ್ಮೆ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಹೇಳುವಂತೆ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಎಲ್ಲಾ ಇಲಾಖೆಗಳ ಕಾಮಗಾರಿಗಳ ಸಂಬಂಧ ಸುಮಾರು 31,000 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಕಾಮಗಾರಿಗಳ ಹಣ ಬಾಕಿ ಇದೆ. ಅದರಲ್ಲೂ ಲೋಕೋಪಯೋಗಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಮಗಾರಿಗಳ ಬಿಲ್ ಬಾಕಿ ಆಗಿದೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ನೀಡಿದ ಬಾಕಿ ಬಿಲ್​ಗಳ ಅಂಕಿ-ಅಂಶದ ಪ್ರಕಾರ, ಜಲಸಂಪನ್ಮೂಲ ಇಲಾಖೆಯಲ್ಲಿ ಸುಮಾರು 12,000 ಕೋಟಿ ಬಾಕಿ ಬಿಲ್ ಉಳಿದಿದೆ. ಹಾಗೆಯೇ, ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 8,700 ಕೋಟಿ ರೂ., ಬಿಬಿಎಂಪಿ ಗುತ್ತಿಗೆದಾರರಿಗೆ ಸುಮಾರು 3,500 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಲ್ಲಿ ಸುಮಾರು 2,900 ಕೋಟಿ ರೂ. , ಕ್ರೆಡಿಲ್, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಸುಮಾರು 3,500 ಕೋಟಿ ರೂ., ಕೊಳೆಗೇರಿ ಹಾಗೂ ವಸತಿ ಇಲಾಖೆಯಲ್ಲಿ ಸುಮಾರು 400 ಕೋಟಿ ರೂ. ಕಾಮಗಾರಿಗಳ ಬಿಲ್​ಗಳು ಬಾಕಿ ಉಳಿದುಕೊಂಡಿವೆ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ.

 

Category
ಕರಾವಳಿ ತರಂಗಿಣಿ