image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಷ್ಟ್ರಧ್ವಜದಿಂದ ಕೈ ಒರೆಸಿಕೊಂಡ ಪ್ರಕರಣ : ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಎ.ಕೃಷ್ಣಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಹೈಕೋರ್ಟ್ ತಡೆಯಾಜ್ಞೆ

ರಾಷ್ಟ್ರಧ್ವಜದಿಂದ ಕೈ ಒರೆಸಿಕೊಂಡ ಪ್ರಕರಣ : ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಎ.ಕೃಷ್ಣಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಸಿಹಿ ಹಂಚಿದ ನಂತರ ಕೈಯನ್ನು ರಾಷ್ಟ್ರಧ್ವಜದಿಂದ ಒರೆಸಿಕೊಂಡ ಪ್ರಕರಣದ ಕುರಿತು ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಎ.ಕೃಷ್ಣಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದೆ. ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ತಮ್ಮ ವಿರುದ್ಧ ತಿಲಕನಗರ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಕೃಷ್ಣಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿ ಸಂಬಂಧ ತಿಲಕನಗರ ಠಾಣಾಧಿಕಾರಿ ಮತ್ತು ಪ್ರಕರಣದ ದೂರುದಾರರಾದ ಪೊಲೀಸ್ ಅಧಿಕಾರಿ ಮಂಜುನಾಥ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಕೋರ್ಟ್​​, ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಯಶಸ್ಸು ಸಾಧಿಸಿದ ಬಗ್ಗೆ ಸಂಭ್ರಮಾಚರಣೆ ಆಚರಿಸಲೇಂದೇ ಸಿಹಿ ಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಉಂಟು ಮಾಡುವ ಯಾವುದೇ ಉದ್ದೇಶ ಅರ್ಜಿದಾರರಿಗೆ ಇರಲಿಲ್ಲ'' ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಯಾಗಿದ್ದ ಮಂಜುನಾಥ್ ಎಂಬವರು ಮೇ 9ರಂದು ತಿಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೇ 8ರಂದು ಜಯನಗರದ 4ನೇ ಹಂತದಲ್ಲಿರುವ ವಿನಾಯಕ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಕನ್ನಡಾಭಿಮಾನ ಸಂಘ ಸಿಹಿ ಹಂಚಿಕೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಕೃಷ್ಣಪ್ಪ ಸಹಿ ಹಂಚಿದ ನಂತರ ಕೈಯನ್ನು ರಾಷ್ಟ್ರಧ್ವಜಕ್ಕೆ ಒರೆಸಿದ್ದಾರೆ. ಆ ಮೂಲಕ ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ದೂರನ್ನು ಪರಿಗಣಿಸಿದ್ದ ಪೊಲೀಸರು, ರಾಷ್ಟ್ರೀಯ ಗೌರವಗಳಿಗೆ ಅವಮಾನ ತಡೆ ಕಾಯ್ದೆ-1971ರ ಸೆಕ್ಷನ್ 2 ರಡಿ ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ತಂದ ಅಪರಾಧದಡಿ ಎಫ್ಐಆರ್ ದಾಖಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಕೃಷ್ಣಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.

Category
ಕರಾವಳಿ ತರಂಗಿಣಿ