ಬೆಂಗಳೂರು: ಭಾರತ-ಪಾಕಿಸ್ತಾನಗಳ ನಡುವೆ ಉಂಟಾಗಿರುವ ಸಂಘರ್ಷ ಸನ್ನಿವೇಶದಲ್ಲಿ ಸೈಬರ್ ವಂಚಕರ ಕುರಿತು ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ. ಉಭಯ ದೇಶಗಳ ನಡುವಿನ ಪರಿಸ್ಥಿತಿಯ ಕುರಿತು ಜನಸಾಮಾನ್ಯರ ಕುತೂಹಲವನ್ನು ಬಳಸಿಕೊಳ್ಳುವ ಸೈಬರ್ ವಂಚಕರು ಸುಳ್ಳು ಸುದ್ದಿ, ಫಿಶಿಂಗ್, ನಕಲಿ ಲಿಂಕ್‌ಗಳ ಮೂಲಕ ವಂಚಿಸುವ ಸಾಧ್ಯತೆಗಳಿವೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಇಂಡೋ-ಪಾಕ್ ಸಂಘರ್ಷ ಸನ್ನಿವೇಶದ ಕುರಿತ ಎಕ್ಸ್‌ಕ್ಲ್ಯೂಸಿವ್ ದೃಶ್ಯಗಳು, ವೈರಲ್ ವಿಡಿಯೋ, ಆಫರ್ ಕುರಿತ ಸಂದೇಶಗಳು ನಕಲಿ ವೆಬ್‌ಸೈಟ್‌ಗಳ ಮೂಲಕ ಸೃಷ್ಟಿಯಾಗಿರಬಹುದು. ಹಾಗೂ ನಿಮ್ಮ ಫೋನ್‌ಗಳಿಗೆ ಮಾಲ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಬಹುದು. ನಕಲಿ ಲಿಂಕ್‌ಗಳ ಮೂಲಕ ಸೇನೆಯಲ್ಲಿ ಕೆಲಸದ ಅಪ್ಲಿಕೇಶನ್ ಹೆಸರಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸೈಬರ್ ವಂಚಕರು ಕಳುವು ಮಾಡಬಹುದು. ತುರ್ತಾಗಿ ಆರ್ಮಿ ನೇಮಕಾತಿ ಮತ್ತಿತರ ಕುರಿತು ಅಪರಿಚಿತರಿಂದ ಮೇಲ್‌ಗಳನ್ನು ಸ್ವೀಕರಿಸಿದರೆ ಅವುಗಳನ್ನು ತೆರೆಯದಿರಿ. ಅವುಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳಿವೆ.ವಾಟ್ಸ್ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುವ ಅಪರಿಚಿತರ ಸಂದೇಶಗಳನ್ನು ತೆರೆಯದಿರಿ. ನಿಮ್ಮ ಪರಿಚಿತರಿಂದಲೇ ಅನುಮಾನಾಸ್ಪದ ಫೈಲ್‌ಗಳನ್ನು ಸ್ವೀಕರಿಸಿದರೂ ಸಹ ತೆರೆಯದಿರಿ ಹಾಗೂ ಇತರರೊಂದಿಗೆ ಹಂಚಿಕೊಳ್ಳದಿರಿ, ಬದಲಿಗೆ ಅವುಗಳನ್ನು ಡಿಲೀಟ್ ಮಾಡುವುದು ಸೂಕ್ತ ಎಂದಿದ್ದಾರೆ.