ರಾಮನಗರ: ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರದಲ್ಲಿ ನಡೆಯುವ ಸಮಾವೇಶದಲ್ಲಿ ತಾಂಡಾ, ಹಟ್ಟಿ ಸೇರಿದಂತೆ ಕಂದಾಯ ಭೂಮಿಯಲ್ಲಿ ವಾಸವಿರುವ 1 ಲಕ್ಷ ಜನರಿಗೆ ಪಟ್ಟಾ ಖಾತೆ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ರಾಮನಗರದಲ್ಲಿ ಇಂದು ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ 'ಯುವ ಪರ್ವ' ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತು ಉಳಿಸಿಕೊಂಡಿದೆ. ಯುವಕರಿಗೆ ಯುವನಿಧಿ ಮೂಲಕ ನೆರವಿಗೆ ನಿಂತಿದೆ. ಮಹಿಳೆಯರ ಪರವಾಗಿ ಐತಿಹಾಸಿಕ ಯೋಜನೆಗಳನ್ನು ತಂದು ಇತಿಹಾಸ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಪಕ್ಷ. ಉಚಿತ ಬಸ್, ಗೃಹಲಕ್ಷ್ಮಿ ಸೇರಿದಂತೆ ಅನೇಕ ಯೋಜನೆಗಳನ್ನು ದಳ, ಬಿಜೆಪಿಯವರು ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಯಲು ಮುಂದಾಗಿದ್ದೇವೆ. ಏಕೆಂದರೆ ಇಲ್ಲಿನ ಭೂಮಿ ಮೌಲ್ಯ ಹೆಚ್ಚಾಗಲಿದೆ. ಜನರ ಬದುಕು ಬದಲಾಗಲಿದೆ. ಇದು ನಮ್ಮ ಜಿಲ್ಲೆ, ನಮ್ಮ ಸ್ವಾಭಿಮಾನ. ಬೆಂಗಳೂರಿಗೆ ನಾವು ಹೋಗುವುದು ತಪ್ಪಿ, ನಮ್ಮನ್ನೇ ಬಳಸಿಕೊಳ್ಳುವ ಕಾಲ ಮುಂದೆ ಬರಬೇಕು. ಸುರೇಶ್ ಅವರು ಸ್ಪರ್ಧಿಸುವ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಕರೆಯಲಾಗುತ್ತದೆ. ನಮ್ಮ ಹೆಸರನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಎಂದು ಮಾಡಲು ಹೊರಟಿದ್ದೇವೆ. ಇದನ್ನು ಕೈ ಬಿಡಿ ಎಂದು ದೇವೇಗೌಡರು, ಸಂಸದ ಮಂಜುನಾಥ್ ಅವರು ಪತ್ರ ಬರೆದಿದ್ದರು. ಈ ಹಿಂದೆ ಇದಕ್ಕೆ ಸಹಿ ಹಾಕಿದವರು ಕುಮಾರಸ್ವಾಮಿ. ಆದರೆ ಅವರಿಗೆ ಇದನ್ನು ಮುಂದುವರೆಸಲು ಆಗುವುದಿಲ್ಲ. ಈಗ ನಾನೇಕೆ ಅದನ್ನು ಡಿನೋಟಿಫಿಕೇಷನ್ ಮಾಡಲಿ?. ಕೇಸನ್ನು ಹಾಕಿಸಿಕೊಳ್ಳಲು ನಾನು ತಯಾರಿಲ್ಲ. ರೈತರಿಗೆ ನಾಲ್ಕು ಪಟ್ಟು ಪರಿಹಾರ ದೊರೆಯುವಂತೆ ಮಾಡುತ್ತೇನೆ. ಯೋಗೇಶ್ವರ್, ಇಕ್ಬಾಲ್ ಅವರೆಲ್ಲಾ ಸೇರಿ ನಿಮ್ಮ ಬದುಕನ್ನು ಭದ್ರ ಮಾಡುತ್ತೇವೆ ಎಂದರು.
ಈ ಹಿಂದೆ ಅಧಿಕಾರದಲ್ಲಿದ್ದಾಗ ಏಕೆ ಒಂದೇ ಒಂದು ಜಿಲ್ಲಾಸ್ಪತ್ರೆ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವತನಕ ವಿಶ್ವವಿದ್ಯಾಲಯ ಕಟ್ಟಡವಿರಲಿಲ್ಲ. ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲಾಗುತ್ತಿದೆ. ಬೆಂಗಳೂರಿನಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿಯೇ ಇಲ್ಲಿಯೂ ನೆರವೇರಿಸಲಾಗುತ್ತದೆ. ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರು ಎಲ್ಲರೂ ಸೇರಿ 50 ಲಕ್ಷ ರೂ ದೇಣಿಗೆ ಸಂಗ್ರಹ ಮಾಡಲಾಗುವುದು. ಕನಕಪುರದಲ್ಲಿ ಇರುವ ಜಾಗವನ್ನು ಹರಾಜಿನಲ್ಲಿ ಮಾರಾಟ ಮಾಡಿ ಆ ಹಣವನ್ನೂ ಸಹ ರಾಮನಗರ ಕಚೇರಿಗೆ ನೀಡಲಾಗುವುದು ಎಂದು ಡಿಕೆಶಿ ಹೇಳಿದರು.