ಬೆಂಗಳೂರು: ಬೆಂಗಳೂರಿನಲ್ಲಿ ಟ್ಯಾಂಕರ್ ನೀರು ಪೂರೈಕೆ ದೊಡ್ಡ ಮಾಫಿಯಾವಾಗಿದೆ. ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಶುಕ್ರವಾರ ನಡೆದ ‘ಸರ್ವರಿಗೂ ಸಂಚಾರಿ ಕಾವೇರಿ’, ‘ಮನೆ ಬಾಗಿಲಿಗೆ ಸರಳ ಕಾವೇರಿ’ ಯೋಜನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿ, ಸುಮಾರು 3 ಸಾವಿರ ಕೊಳವೆ ಬಾವಿ ಕೊರೆಸಿ, ಟ್ಯಾಂಕರ್ ಗಳನ್ನು ಇಟ್ಟುಕೊಂಡು 3 ಸಾವಿರ ರೂಪಾಯಿವರೆಗೂ ಹಣ ವಸೂಲಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಇಂದು ಈ ಯೋಜನೆ ಮೂಲಕ 4 ಸಾವಿರ ಲೀಟರ್ ನೀರಿಗೆ 660 ರೂ. ಹಾಗೂ 6 ಸಾವಿರ ಲೀಟರ್ ನೀರಿಗೆ 740 ರೂ. ದರ ನಿಗದಿ ಮಾಡಲಾಗಿದೆ. ಇದು ಕೊಳವೆ ಬಾವಿ ನೀರಲ್ಲ. ಇದು ಬಿಡಬ್ಲ್ಯೂಎಸ್ಎಸ್ ಬಿ ವತಿಯಿಂದ ನೀಡುತ್ತಿರುವ ಶುದ್ಧ ಕುಡಿಯುವ ನೀರು ಎಂದು ತಿಳಿಸಿದರು.
ನೀರಿನ ಮಾಫಿಯಾ ತಡೆಯಲು ಈ ಯೋಜನೆ ಚಾಲನೆ ನೀಡಲಾಗಿದೆ. ಇದು ಸಣ್ಣ ಯೋಜನೆಯಲ್ಲ. ಕಳೆದ ವರ್ಷ ಬರಗಾಲದಲ್ಲಿ ನೀರಿನ ಅಭಾವ ಎದುರಾದಾಗ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಲಾಯಿತು. ಕೆರೆಗಳನ್ನು ತುಂಬಿಸಿ, ಅಂತರ್ಜಲ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆಗಳ ಅಭಿವೃದ್ಧಿ ಸಭೆ ಮಾಡಲಾಗಿದೆ. ಸಣ್ಣ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಕೇವಲ 1 ಸಾವಿರ ಶುಲ್ಕ ಪಡೆಯಲು ತೀರ್ಮಾನಿಸಿದ್ದೇವೆ. ಅಪಾರ್ಟ್ಮೆಂಟ್ ನವರಿಗೆ ಆರಂಭದಲ್ಲಿ 20% ಹಣ ಪಡೆದು ನಂತರ ಒಂದು ವರ್ಷ ಕಾಲಾವಕಾಶ ನೀಡಲು ಮುಂದಾಗಿದ್ದೇವೆ. ಹೀಗೆ ಹೊಸ ನೀತಿಗಳ ಮೂಲಕ ಎಲ್ಲವನ್ನು ಒಂದು ವ್ಯವಸ್ಥೆಯಲ್ಲಿ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಇಂದು ಸರ್ವರಿಗೂ ಸರಳ ಕಾವೇರಿ, ಮನೆ ಬಾಗಿಲಿಗೆ ಸಂಚಾರಿ ಕಾವೇರಿ ಯೋಜನೆಗಳನ್ನು ಪ್ರಾರಂಭಿಸಿದ್ದು, ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಂತಹ ಯೋಜನೆ ಜಾರಿಗೆ ತರಲಾಗಿದೆ. ನಿನ್ನೆ ನೆಲಮಂಗಲದಲ್ಲಿ ರೂ.1,900 ಕೋಟಿ ವೆಚ್ಚದಲ್ಲಿ ವೃಷಭಾವತಿ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಪ್ರತಿ ನೀರಿನ ಹನಿಯು ಮಹತ್ವದ್ದಾಗಿದೆ. ಅನೇಕರು ಇದನ್ನು ಟೀಕೆ ಮಾಡಬಹುದು. ಆದರೆ ಇಂತಹ ಯೋಜನೆ ಇದೇ ಮೊದಲಲ್ಲ. ದೆಹಲಿಯಲ್ಲೂ ಯಮುನಾ ನದಿ ನೀರನ್ನು ಗಿಡ ಬೆಳೆಸಲು, ವಾಹನ ತೊಳೆಯಲು ಹಾಗೂ ಕೈಗಾರಿಕೆಗೆ ಪೂರೈಸುತ್ತಾರೆ ಎಂದರು.