image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಶೇಷಚೇತನ ನೌಕರರಿಗೆ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮತಿ

ವಿಶೇಷಚೇತನ ನೌಕರರಿಗೆ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮತಿ

ಬೆಂಗಳೂರು: ವಿಶೇಷಚೇತನ ಅಧಿಕಾರಿ/ನೌಕರರಿಗೆ ಗುಂಪು-ಎ (ಕಿರಿಯ ಶ್ರೇಣಿ) ಮತ್ತು ಗುಂಪು-ಬಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮತಿಸಿದೆ. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರಲ್ಲಿ ಪರಿಭಾಷಿಸಲಾಗಿರುವ ಎದ್ದುಕಾಣುವ ಅಂಗವೈಕಲ್ಯವುಳ್ಳ ಅಧಿಕಾರಿಗಳಿಗೆ ಗುಂಪು-ಬಿ ಮತ್ತು ಗುಂಪು-ಎ (ಕಿರಿಯ ಶ್ರೇಣಿ) ಹುದ್ದೆಗಳಲ್ಲಿ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಸಮೀಕ್ಷಾ ವರದಿ ಬಗ್ಗೆ ಚರ್ಚೆ ನಡೆದಿದೆ. ಸಿಎಂಗೆ ಹಲವು ಸಚಿವರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಇನ್ನೂ ಕೆಲವರ ಅಭಿಪ್ರಾಯ ಪಡೆಯ ಬೇಕಾಗಿದೆ. ಹೆಚ್ಚಿನ ಮಾಹಿತಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಒದಗಿಸಿದ್ದಾರೆ. ಮುಂದಿನ‌ ವಾರದ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಸಚಿವರಿಗೆ ತಾಲೂಕುವಾರು ದತ್ತಾಂಶ ನೀಡಲು ಸೂಚನೆ ನೀಡಲಾಗಿದೆ. ಸುಮಾರು 11 ಸಚಿವರು ಲಿಖಿತ ಅಭಿಪ್ರಾಯ ಸಲ್ಲಿಸಿದ್ದಾರೆ. ಇನ್ನೂ ಉಳಿದವರಿಗೆ ಲಿಖಿತ ಅಭಿಪ್ರಾಯ ನೀಡಲು ಸಿಎಂ ಸೂಚಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಎದಿರೇಟು ನೀಡಿರುವ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಲಾಯಿತು ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಸೂಕ್ತವಾಗಿ ಶಾಸ್ತಿ ಮಾಡಿದೆ. ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಭಾರತ ಸೇನೆಗೆ ಸಚಿವ ಸಂಪುಟ ಅಭಿನಂದನೆ ಸಲ್ಲಿಸಿತು. ಯುದ್ದದ ಸನ್ನಿವೇಶವನ್ನು ಸೃಷ್ಟಿ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಲಾಯಿತು ಎಂದರು.

2025-26ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಹೊರಡಿಸಲು ಮತ್ತು ಈ ಮಾರ್ಗಸೂಚಿಯನ್ನು ಪರಿಷ್ಕರಿಸಲು ಹಾಗೂ ವರ್ಗಾವಣಾ ಅವಧಿಯನ್ನು ವಿಸ್ತರಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಸಚಿವರು ವಿವರಿಸಿದರು. ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ 15.05.2025 ರಿಂದ 14.06.2025 ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್ 'ಸಿ' ಮತ್ತು 'ಡಿ' ವೃಂದದ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.

ಕರಡು ಕರ್ನಾಟಕ ಕಾರ್ಮಿಕ ರಾಜ್ಯ ವಿಮಾ ಯೋಜನೆ (ವೈದ್ಯಕೀಯ) ಸೇವೆಗಳ (ನೇಮಕಾತಿ) ನಿಯಮಗಳು 2025ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ ಬಾಧಿತರಾಗಬಹುದಾದಂತಹ ವ್ಯಕ್ತಿಗಳಿಂದ ಸಲಹೆ/ಆಕ್ಷೇಪಣೆಗಳನ್ನು ಆಹ್ವಾನಿಸಲು ಮತ್ತು ಸಲಹೆ/ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಅಥವಾ ಸ್ವೀಕೃತವಾದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಿ ಕರಡು ನಿಯಮಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಇಲ್ಲದಿದ್ದಲ್ಲಿ ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸದೆ, ಸದರಿ ನಿಯಮಗಳನ್ನು ಇಲಾಖಾ ಹಂತದಲ್ಲಿಯೇ ಅಂತಿಮಗೊಳಿಸಲು ಸಂಪುಟ ನಿರ್ಧರಿಸಿದೆ.

Category
ಕರಾವಳಿ ತರಂಗಿಣಿ