ಬೆಂಗಳೂರು: 2017ರ ಆಗಸ್ಟ್ನಲ್ಲಿ ಕೆನಡಾದಲ್ಲಿ ನಡೆದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗೆದ್ದಿರುವ ವಿಶೇಷಚೇತನ ಕ್ರೀಡಾಪಟುಗಳಿಗೆ 2013ರ ಮಾರ್ಗಸೂಚಿಗಳಂತೆ ನಗದು ಬಹುಮಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕೆನಡಾದಲ್ಲಿ ನಡೆದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಿ.ವಿ.ರಾಜಣ್ಣ ಮತ್ತು ಇತರ ಆರು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಪದ್ಮ ಪ್ರಶಸ್ತಿ ಪಡೆದ ಸುಕ್ರಿ ಬೊಮ್ಮನಗೌಡ ಬಗ್ಗೆ ನಿಮಗೆಷ್ಟು ತಿಳಿದಿದೆ..
ಅಲ್ಲದೇ, ರಾಜ್ಯ ಸರ್ಕಾರ 2013ರ ನವೆಂಬರ್ 30 ರಂದು ಹೊರಡಿಸಿರುವ ಆದೇಶದಂತೆ ಅರ್ಜಿದಾರರು ತಿಳಿಸಿರುವಂತೆ ನಗದು ಬಹುಮಾನ ನೀಡಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಮುಂದಿನ ಎಂಟು ವಾರಗಳಲ್ಲಿ ಆದೇಶ ಜಾರಿಮಾಡಬೇಕು ಎಂದು ನಿರ್ದೇಶನ ನೀಡಿದೆ. 2013ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದಂತೆ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದವರಿಗೆ 10 ಲಕ್ಷ ರೂ. ಬೆಳ್ಳಿ ಪದಕ ಗೆದ್ದವರಿಗೆ 7 ಲಕ್ಷ ರೂ. ಮತ್ತು ಕಂಚು ಗೆದ್ದವರಿಗೆ 5 ಲಕ್ಷ ರೂ. ಎಂಬುದಾಗಿ ತಿಳಿಸಿತ್ತು. ಈ ಆದೇಶ ಅರ್ಜಿದಾರರು ಕ್ರೀಡಾ ಕೂಟಕ್ಕೆ ಆಯ್ಕೆಯಾಗುವ ಸಂದರ್ಭದಲ್ಲಿ ಚಾಲ್ತಿಯಲ್ಲಿದೆ. ಆದ್ದರಿಂದ ಅರ್ಜಿದಾರರು ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ ಎಂದು ಪೀಠ ಹೇಳಿದೆ.
ಕರ್ನಾಟಕ ರಾಜ್ಯ ವಿರುದ್ಧದ ನಿರಂಜನ್ ಮುಕುಂದನ್ ಪ್ರಕರಣದಲ್ಲಿ ಹೈಕೋರ್ಟ್ನ ವಿಭಾಗೀಯ ಪೀಠ 2022ರ ಜೂನ್ 21ರಂದು ಹೊರಡಿಸಿದ್ದ ಆದೇಶವನ್ನು ಉಲ್ಲೇಖಿಸಿದ ನ್ಯಾಯಪೀಠ, ಅರ್ಜಿದಾರರಿಗೆ 2013ರ ಮಾರ್ಗಸೂಚಿಗಳ ಅನ್ವಯ ನಗದು ಬಹುಮಾನ ನೀಡಬೇಕು ಎಂದು ತಿಳಿಸಿದೆ. ಜತೆಗೆ, ಅರ್ಜಿದಾರರು ವಿಶ್ವ ಕುಬ್ಜ ಫೆಡರೇಷನ್ಸ್ನ ಆಹ್ವಾನದ ಮೇರೆಗೆ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ. ಆದರೆ, ರಾಜ್ಯ ಸರ್ಕಾರದ ಮೂಲಕ ಅಲ್ಲ. ಹೀಗಾಗಿ ಅರ್ಜಿದಾರರಿಗೆ ನಗದು ಬಹುಮಾನ ನೀಡಲು ಸಾಧ್ಯವಿಲ್ಲ ಎಂಬ ಸರ್ಕಾರದ ವಾದವು ಮುಕುಂದನ್ ಪ್ರಕರಣದಲ್ಲಿ ನೀಡಿರುವ ಆದೇಶಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಪರಿಹಾರ ಒದಗಿಸಲು ಸೂಚನೆ ನೀಡಿ ಆದೇಶಿಸಿದೆ.ಅರ್ಜಿದಾರರು ಹಲವಾರು ಕ್ರೀಡಾಕೂಟಗಳಲ್ಲಿ ಅದರಲ್ಲಿಯೂ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.
2017ರಲ್ಲಿ ಕೆನಡಾದಲ್ಲಿ ನಡೆದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹ ಕ್ರೀಡಾಪಟುಗಳನ್ನು ಭಾರತೀಯ ಕುಬ್ಜ ಕ್ರೀಡಾ ಫೆಡರೇಷನ್ ಮತ್ತು ಕರ್ನಾಟಕ ವಿಕಲಚೇತನರ ಕ್ರೀಡಾ ಸಂಘ ಆಯ್ಕೆ ಮಾಡಿತ್ತು. ಅದರಂತೆ ಒಟ್ಟು 26 ಅಭ್ಯರ್ಥಿಗಳನ್ನು ಕೆನಡಾ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗಿತ್ತು. ಅರ್ಜಿದಾರರಾದ ಏಳು ಮಂದಿ ಕರ್ನಾಟಕದಿಂದ ಕೆನಡಾ ವಿಶ್ವ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು.
ಕರ್ನಾಟಕದಿಂದ ಆಯ್ಕೆಯಾಗಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಕುರಿತಂತೆ ರಾಜ್ಯ ಸರ್ಕಾರ 2013ರಲ್ಲಿ ಕೆಲವು ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ, 2017ರ ಆಗಸ್ಟ್ 12ರಂದು ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿದ್ದ ಅರ್ಜಿದಾರರಿಗೆ ಸರ್ಕಾರ ಯಾವುದೇ ಪರಿಹಾರ ನೀಡಿರಲಿಲ್ಲ.
2013ರ ಮಾರ್ಗಸೂಚಿಗಳ ಅನ್ವಯ ಪರಿಹಾರ ನೀಡಲು ನಿರ್ದೇಶನ ಕೋರಿ ಅರ್ಜಿದಾರರು 2021ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರ ಅವರ ಮನವಿಯನ್ನು 2022ರ ಜನವರಿ 13 ರಂದು ತಿರಸ್ಕರಿಸಿತ್ತು.
ಹೀಗಾಗಿ ಮತ್ತೆ 2024ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ಹೊಸದಾಗಿ ಪರಿಗಣಿಸಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ಸರ್ಕಾರ ಪರಿಹಾರ ನೀಡಲು ನಿರಾಕರಿಸಿತ್ತು. ಹೀಗಾಗಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.