image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು NIAಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು NIAಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ

ಬೆಂಗಳೂರು: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸುವಂತೆ ಕೋರಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರಿಗೆ ಬಿಜೆಪಿ ನಿಯೋಗ ಶುಕ್ರವಾರ ಮನವಿ ಪತ್ರ ಸಲ್ಲಿಸಿದೆ.

ಪ್ರತಿಪಕ್ಷ ನಾಯಕ ಆರ್.ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ, ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಆದ್ದರಿಂದ ಇದರ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಕೋರಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್, ''ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ, ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್‌ ಶೆಟ್ಟಿಯ ಕೊಲೆಯ ಬಗ್ಗೆ ವಿವರಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಪಾರಿ ನೀಡಿರುವ ಪ್ರಕರಣ. ಮುಸ್ಲಿಂ ಹುಡುಗನ ಕೊಲೆಯಾಗಿದ್ದಕ್ಕೆ ಆ ಕುಟುಂಬಕ್ಕೆ ಕಾಂಗ್ರೆಸ್‌ 25 ಲಕ್ಷ ರೂ. ಪರಿಹಾರ ನೀಡಿದ್ದು, ಆ ಹಣವನ್ನು ಬಳಸಿಯೇ ಸುಪಾರಿ ನೀಡಲಾಗಿದೆ. ಸ್ಪೀಕರ್‌ ಯು.ಟಿ.ಖಾದರ್‌ ಅವರು ಆ ಕುಟುಂಬದವರು ಒಳ್ಳೆಯವರು ಎಂದು ಹೇಳಿದ್ದಾರೆ. ಆ ಮನೆಯವರೇ ಸುಪಾರಿ ನೀಡಿದ್ದಾರೆ ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ. ಸ್ಪೀಕರ್‌ ಆಗಿ ಕೊಲೆ ಪ್ರಕರಣದ ಬಗ್ಗೆ ಮಾತನಾಡುವ ಅಗತ್ಯವೇನಿದೆ? ಯಾವುದೇ ಸ್ಪೀಕರ್‌ ಕೊಲೆ ಬಗ್ಗೆ ಮಾತನಾಡಿದ (history) ಇತಿಹಾಸವೇ ಇಲ್ಲ'' ಎಂದರು.

''ಕಾಂಗ್ರೆಸ್‌ ಸರ್ಕಾರ ಇಂತಹವರ ವಿಚಾರದಲ್ಲಿ ಮೃದು ಧೋರಣೆ ತಾಳಿದೆ. ಈ ಪ್ರಕರಣದ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ಪಾಕಿಸ್ತಾನ ಜಿಂದಾಬಾದ್‌ ಘೋಷಣೆಗೆ, ಭಯೋತ್ಪಾದನೆ ಚಟುವಟಿಕೆಗೆ ಪ್ರೇರಣೆ ಕೊಡುವವರ ಸಂಪರ್ಕ ಇವರಿಗಿದೆ. ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ. ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವವರಿಗೆ ಆಪರೇಷನ್‌ ಸಿಂಧೂರದಂತೆಯೇ ಶಾಸ್ತಿ ಆಗಬೇಕಿದೆ. ಇದಕ್ಕೆ ಅಂತ್ಯ ಕಾಣಿಸಬೇಕಿದೆ. ಇದಕ್ಕಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಕೋರಲಾಗಿದೆ'' ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ''ಸುಹಾಸ್ ಹತ್ಯೆ ಪ್ರಕರಣದ ಎನ್‍ಐಎ ತನಿಖೆ ಆಗಬೇಕು. ಈ ವಿಷಯದಲ್ಲಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಆದೇಶ ಮಾಡಿಸಲು ವಿನಂತಿಸಿದ್ದೇವೆ. ಸುಹಾಸ್ ಹತ್ಯೆ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಯ ನಮ್ಮ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ನಮ್ಮೆಲ್ಲ ಜನಪ್ರತಿನಿಧಿಗಳು, ಸುಹಾಸ್ ಮನೆಯವರು, ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದರು. ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಚರ್ಚೆ ನಡೆಯುತ್ತಿದೆ. ಪಿಎಫ್‍ಐ ನಂಟು ಕೂಡ ಕಾಣುತ್ತಿದೆ'' ಎಂದು ಆರೋಪಿಸಿದರು.

ಫಾಝಿಲ್ ಕುಟುಂಬದವರು ಇದರಲ್ಲಿ ಇಲ್ಲ ಎಂಬ ಸ್ಪೀಕರ್ ಹೇಳಿಕೆಯು ಪರೋಕ್ಷವಾಗಿ ಅವರಿಗೆ ರಕ್ಷಣೆ ಕೊಡುವಂತಿದೆ. ಗೃಹ ಸಚಿವ ಪರಮೇಶ್ವರ್ ಅವರು, ತನಿಖೆ ಪ್ರಾರಂಭಕ್ಕೂ ಮೊದಲು ಎನ್‍ಐಎಗೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳಿಂದ ಅಲ್ಲಿನ ಪೊಲೀಸರು ಯಾವ ರೀತಿ ಪ್ರಾಮಾಣಿಕವಾಗಿ ತನಿಖೆ ಮಾಡಲು ಸಾಧ್ಯವಿದೆ?. ಇನ್ನುಳಿದ ಹಿಂದೂ ಕಾರ್ಯಕರ್ತರಿಗೆ ಯಾವ ರೀತಿ ರಕ್ಷಣೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

Category
ಕರಾವಳಿ ತರಂಗಿಣಿ