ಹುಬ್ಬಳ್ಳಿ : ಸಾರ್ವಜನಿಕ ಶಾಂತಿ, ನೆಮ್ಮದಿ ಭಂಗ ಆಗದಂತೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಾಗುತ್ತೆ. ವೈಲೆಂಟ್ ಆರೋಪಿಗಳ ಮೇಲೆ ರೌಡಿ ಶೀಟರ್ ಹಾಕಲಾಗುವುದು. ಗಡಿಪಾರು, ಗುಂಡಾ ಆಕ್ಟ್ ಮಾಡುವ ಕೆಲಸ ಮಾಡ್ತಾ ಬಂದಿದ್ದೇವೆ. ರಾಜ್ಯದಲ್ಲಿ ರೌಡಿ ಶೀಟರ್ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆ ನಮ್ಮ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಪರೇಡ್ ಮಾಡಲಾಗುತ್ತಿದೆ ಎಂದು ಹು -ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ರೌಡಿಪರೇಡ್ ನಡೆಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನ ಪರೇಡ್ನಲ್ಲಿ ಒಟ್ಟು 1,700 ರೌಡಿ ಶೀಟರ್ಗಳನ್ನ ಕರೆತರಲಾಗಿದೆ. ಪ್ರತಿ ಠಾಣೆಯಿಂದ 50 - 60 ರಿಂದ 200ರ ವರೆಗೆ ರೌಡಿ ಶೀಟರ್ ಇದ್ದಾರೆ. 50 ಜನರನ್ನ ಗಡಿಪಾರು ಮಾಡಲಾಗಿದ್ದು, ಆರೋಪಿಗಳ ಮೇಲೆ ರೌಡಿ ಶೀಟ್ ಇತ್ತು. ಬೀದರ್, ಕಲ್ಬುರ್ಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾನಾ? ಅಂತ ಸಹ ನಾವು ಪರಿಶೀಲನೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ:- ಬಾಯಲ್ಲಿಟ್ಟರೆ ಕರಗುವ ರವೆ ಲಡ್ಡು
ಮಾರಕಾಸ್ತ್ರ ಇಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರು, ಹಲವು ಕೃತ್ಯ ಮಾಡಿದವರ ಮೇಲೆ ಕ್ರಮ ಕೈಗೊಂಡಿದ್ದೇವೆ. ಇದರ ಆಧಾರದ ಮೇಲೆ ಪರೇಡ್ ಮಾಡ್ತಾ ಇದ್ದೇವೆ. ಇವತ್ತು 980 ಜನ ರೌಡಿಗಳು ಬಂದಿದ್ದಾರೆ. ಉಳಿದವರು ಅನಾರೋಗ್ಯ ಸೇರಿ ಹಲವು ಕಾರಣಗಳಿಂದ ಬಂದಿಲ್ಲ. ಕೆಲವರು ರೌಡಿ ಶೀಟರ್ ಪರೇಡ್ ಮಾಡ್ತಾ ಇರೋ ವಿಷಯ ಕೇಳಿ ಪರಾರಿ ಆಗಿದ್ದಾರೆ. ನಿನ್ನೆ ರಾತ್ರಿ 12 ಗಂಟೆಯಿಂದಲೇ ಎಲ್ಲಾ ಪ್ರೊಸೆಸ್ ಮಾಡ್ತಾ ಇದ್ದೆವು. ಆರೋಪಿಗಳ ಮೊಬೈಲ್ಗಳನ್ನು ಸಹ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದರು.
2025ರಲ್ಲಿ ಹೊಸದಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರನ್ನು ಸಹ ಗಡಿಪಾರು ಹಾಗೂ ಗುಂಡಾ ಆಕ್ಟ್ ಹಾಕಲಾಗಿದೆ. ರೌಡಿ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆ ಸಹ ಆರಂಭ ಮಾಡಿದ್ದೇವೆ. ಕೆಲವರದ್ದು 2000 ಇಸ್ವಿಯಲ್ಲಿ ಆಗಿದೆ. 65 ವರ್ಷದ ಮೇಲಿನವರನ್ನ ಸಹ ಗಣನೆಗೆ ತೆಗೆದುಕೊಂಡಿದ್ದೇವೆ. 1,700 ಬಹಳ ದೊಡ್ಡ ಸಂಖ್ಯೆ. ನಮ್ಮ ಪೊಲೀಸ್ ಸಿಬ್ಬಂದಿಗಿಂತ ಹೆಚ್ಚಾಗಿದೆ. ಮುಂದಿನ ಎರಡು ತಿಂಗಳಲ್ಲಿ ಉತ್ತಮ ನಡತೆ ಇದ್ದವರ ವಿರುದ್ಧದ ಕೇಸ್ ಕ್ಲೋಸ್ ಮಾಡಲಾಗುತ್ತೆ.
ಇದೇ ವೇಳೆ ಒಬ್ಬೊಬ್ಬ ರೌಡಿಗಳ ಮಾಹಿತಿಯನ್ನೂ ಪ್ರತ್ಯೇಕವಾಗಿ ಪಡೆದುಕೊಂಡರು. ಅವರ ಹಿನ್ನೆಲೆ ಪಡೆದ ಕಮಿಷನರ್ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಕಟ್ಟಿಕೊಂಡು ಓಡಾಡುವುದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಪ್ರಚಾರ ತೆಗೆದುಕೊಂಡರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿಯ ಕೆಲ ರೌಡಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಹುಡುಗರು ಗುಂಪು ಕಟ್ಟಿಕೊಂಡು ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು. ಅಂತವರಿಗೆ ಕಮಿಷನರ್ ಖಡಕ್ ವಾರ್ನಿಂಗ್ ಕೊಟ್ಟರು.