ಬೆಂಗಳೂರು: "ರಾಯಚೂರು, ಕೈಗಾ, ಕೆಆರ್ಎಸ್ಗೆ ಭದ್ರತೆ ಹೆಚ್ಚಳ ಮಾಡಲಾಗಿದೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ಭದ್ರತೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಭದ್ರತೆಗೆ ಸ್ಪೆಷಲ್ ಫೋರ್ಸಸ್ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ರಾಯಚೂರು, ಕೈಗಾ, ಕೆ.ಆರ್.ಎಸ್ಗೆ ಭದ್ರತೆ ಹೆಚ್ಚಿಸಲಾಗಿದೆ. ಅದಕ್ಕಾಗಿ ಕೈಗಾರಿಕಾ ಭದ್ರತಾ ಪಡೆ ಬಳಕೆ ಮಾಡಿಕೊಳ್ಳುತ್ತೇವೆ. ಅವರಿಗೆ ಕಮಾಂಡೋ ಟ್ರೈನಿಂಗ್ ಎಲ್ಲಾ ಆಗಿದೆ. ಹೆಚ್ಚುವರಿಯಾಗಿ ಅವರನ್ನು ಬಳಸಿಕೊಳ್ಳುತ್ತೇವೆ" ಎಂದರು.
"ಎಲ್ಲಾ ಇಲಾಖೆಯಲ್ಲೂ ಭದ್ರತೆಗೆ ಬೇಕಾದ ಸಂಖ್ಯೆ ಇದೆ. ಅಡಿಷನಲ್ ಆಗಿ ನೇಮಕಾತಿ ಮಾಡಿಕೊಂಡರೆ ಒಂದು ವರ್ಷ ಟ್ರೈನಿಂಗ್ ಆಗಬೇಕು. ನಿನ್ನೆ ಮಾಕ್ ಡ್ರಿಲ್ ಸಂಬಂಧ ಕೇಂದ್ರದಿಂದ ಸೂಚನೆ ಬಂದಿತ್ತು. ಮೂರು ಜಿಲ್ಲೆಯಲ್ಲಿ ಮಾಡುವಂತೆ ಸೂಚನೆ ಬಂದಿತ್ತು. ಹೆಚ್ಚುವರಿಯಾಗಿ ಮೈಸೂರು ಆಯ್ಕೆ ಮಾಡಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದೇವೆ. ಎಸ್ಪಿಗಳಿಗೆ ಭದ್ರತೆ ಬಗ್ಗೆ ಸೂಚಿಸಿದ್ದೇವೆ" ಎಂದು ತಿಳಿಸಿದರು.
ಈ ಸಂಬಂಧ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, "ಜಲಾಶಯ, ಕೈಗಾರಿಕೆಗಳಿಗೆ ಉಗ್ರರ ದಾಳಿ ಆದಾಗ ಭದ್ರತೆ ನೀಡುತ್ತೇವೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ಆಗ ಅಣೆಕಟ್ಟುಗಳಿಗೆ ಭದ್ರತೆ ನೀಡಲು ಸೂಚಿಸುತ್ತಿದ್ದೆ. ಉಗ್ರರ ದಾಳಿ ನಡೆಸಿದಾಗ ಭದ್ರತೆ ನೀಡುತ್ತಾರೆ. ಅದಕ್ಕೆ ಭದ್ರತಾ ಟೀಂ ಇರುತ್ತದೆ. ಅವರ ನೇತೃತ್ವದಲ್ಲಿ ಸೆಕ್ಯುರಿಟಿ ನೀಡಲಾಗುತ್ತದೆ. ಉಗ್ರರು ಡ್ಯಾಂ ಗಳ ಮೇಲೆ ದಾಳಿ ಮಾಡುವ ಸಂಭವ ಇರುತ್ತದೆ. ಜಲ ಸಂಪನ್ಮೂಲ ಇಲಾಖೆಗೆ ಉಪ ಮುಖ್ಯಮಂತ್ರಿಗಳು ಸೂಚನೆ ನೀಡುತ್ತಾರೆ" ಎಂದರು.
"ಕೈಗಾರಿಕೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಕಡೆ ಭದ್ರತೆ ಮುಖ್ಯವಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಒಗ್ಗಟ್ಟಾಗಿ ಕ್ರಮ ಕೈಗೊಳುತ್ತದೆ. ರಾಜಕೀಯ, ಪಕ್ಷ ಭೇದ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಾವು ಕೇಂದ್ರದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ" ಎಂದು ಸ್ಪಷ್ಟಪಡಿಸಿದರು.