ಬೆಂಗಳೂರು: "ಪಹಲ್ಗಾಮ್ ದಾಳಿಯಲ್ಲಿ ಅಮಾಯಕರನ್ನು ಕೊಂದ ಪಾಕಿಸ್ತಾನದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ( operation sindhoor) ಕಾರ್ಯಾಚರಣೆ ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ" ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, "ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನಕ್ಕೆ ತಕ್ಕ ಪಾಠ. ನಮ್ಮ ತಂಟೆಗೆ ಬಂದರೆ ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ನಮ್ಮ ಸೇನೆ ನಮ್ಮ ಹೆಮ್ಮೆ" ಎಂದು ಹೇಳಿದ್ದಾರೆ.
"ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದಕ ಕೃತ್ಯ ಎಸಗುವ ಉಗ್ರಗಾಮಿ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜೊತೆಗಿದ್ದೇವೆ" ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಗದಗನಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, "ಭಾರತೀಯ ಸೈನ್ಯದ ದಾಳಿ ಸಮಾಧಾನ ತಂದಿದೆ. ಉಗ್ರರ ಕುತಂತ್ರದ ದಾಳಿಗೆ ತಕ್ಕ ಶಾಸ್ತಿಯಾಗಿ ಅವರ ತಾಣಗಳನ್ನು ಭಾರತ ಸೈನ್ಯ ಧ್ವಂಸ ಮಾಡಿದೆ. ಭಾರತ ಕೆಣಕಿದ್ರೆ ತಕ್ಕ ಶಾಸ್ತಿ ಆಗುತ್ತೆ. ಸದ್ಯ ಮೊದಲ ಹೆಜ್ಜೆಯನ್ನು ಭಾರತ ಸೇನೆ ಇಟ್ಟಿದೆ" ಎಂದಿದ್ದಾರೆ.
"ದೇಶದ ಜನರು ಒಗ್ಗಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಸಮರ್ಥ ಬಲ ಮೂಡುವ ಹಾಗೆ ಸೂಕ್ತ ಕಾರ್ಯಾಚರಣೆ ಆಗಿದೆ. ಇದು ಯುದ್ಧ ಕಾಲ ಎಲ್ಲರೂ ಸನ್ನದ್ಧರಾಗಿ ಇರಬೇಕು. ಗಡಿಯಿಂದ ಎಷ್ಟು ದೂರ ಇದ್ದೇವೆ ಅನ್ನು ಪ್ರಶ್ನೆ ಅಲ್ಲ. ಎಲ್ಲ ರೀತಿಯ ಜಾಗೃಕತೆ ಇರಬೇಕು. ಆ ಹಿನ್ನೆಲೆಯಲ್ಲಿ ಎಲ್ಲರೂ ತಯಾರಿ ಮಾಡಿಕೊಳ್ಳಬೇಕು" ಎಂದು ತಿಳಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಇಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ.