ಬೆಂಗಳೂರು: ಕ್ರೀಡಾ ಸಮಿತಿಯಿಂದ ಕ್ರೀಡಾ ಪ್ರಾಧಿಕಾರ ರಚನೆಯಾದರೂ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸೋಮವಾರ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಪ್ರಾಧಿಕಾರ ರಚಿಸಿದ ಉದ್ದೇಶವೇ ಈಡೇರದಿದ್ದರೆ, ಇದನ್ನು ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದ ಸಿಎಂ, ನಿಗದಿತವಾಗಿ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಕಾರ್ಯಚಟುವಟಿಕೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅದಕ್ಕಿಂತ ಉತ್ತಮ ರೀತಿಯಲ್ಲಿ ನಮ್ಮ ಮಿತಿಯೊಳಗೆ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕ್ರಮ ವಹಿಸಲು ಸೂಚಿಸಿದರು.
ಮುಂದಿನ ಐದಾರು ತಿಂಗಳಲ್ಲಿ ದಸರಾ ಕ್ರೀಡಾಕೂಟ ಆರಂಭವಾಗುವುದರೊಳಗೆ ಪ್ರಾಧಿಕಾರ ಕ್ರಿಯಾಶೀಲ ಆಗಬೇಕು ಎಂದ ಸಿಎಂ, ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟರೂ ಅಗತ್ಯ ತರಬೇತುದಾರರ ನೇಮಕಾತಿ ಆಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
176 ತರಬೇತುದಾರರ ನೇಮಕಾತಿಗೆ ನಾನೇ ಸೂಚಿಸಿ ಒಂದು ವರ್ಷ ಆಗಿದೆ. ಆದರೂ ನೇಮಕಾತಿ ಪ್ರಕ್ರಿಯೆ ಚುರುಕು ಆಗದಿರುವುದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಪ್ರತಿ ಜಿಲ್ಲೆಯಲ್ಲೂ ಉಪ ನಿರ್ದೇಶಕರು ಕಡ್ಡಾಯವಾಗಿ ಇರಬೇಕು. ಪ್ರತಿವರ್ಷ ಪ್ರಾಧಿಕಾರದ ಸಭೆ, ಆಡಿಟ್ ಹಾಗೂ ನೇಮಕಾತಿ ನಡೆಯಬೇಕು. ತಪ್ಪಿದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸಲು ಅನುದಾನ ನಿಗದಿಪಡಿಸಲು ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸುವ ಮೊದಲು ಕನಿಷ್ಠ 15 ರಾಷ್ಟ್ರಗಳು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಸರಿಯಾದ ಗೈಡ್ಲೈನ್ಸ್ ಸಿದ್ಧಪಡಿಸಬೇಕು. ಕೇವಲ ಲೆಟರ್ ಹೆಡ್ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟ ಎಂದು ಬರುವ ಸಂಸ್ಥೆಗಳಿಗೆ ಕಡಿವಾಣ ಹಾಕಿ, ಪ್ರಾಮಾಣಿಕವಾಗಿ ಕ್ರೀಡಾಕೂಟ ನಡೆಸುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.