image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಾಕಿಸ್ತಾನದ ಮೂವರು ಮಕ್ಕಳಿಂದ ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಪಾಕಿಸ್ತಾನದ ಮೂವರು ಮಕ್ಕಳಿಂದ ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಗುಂಡಿನ ದಾಳಿಯ ಬಳಿಕ ಭಾರತದಲ್ಲಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ದೇಶ ತೊರೆಯಬೇಕೆಂಬ ಸರ್ಕಾರದ ನಿರ್ದೇಶನದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿದ ಪಾಕಿಸ್ತಾನದ ಮೂವರು ಮಕ್ಕಳು, ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪಾಕ್​​ನ ಬಲೂಚಿಸ್ತಾನದ 8 ವರ್ಷದ ಕುಮಾರಿ ಬಿಬಿ ಯಾಮಿನಾ, 4 ವರ್ಷದ ಮಾಸ್ಟರ್‌ ಮುಹಮ್ಮದ್ ಮುದಾಸ್ಸಿರ್ ಮತ್ತು 3 ವರ್ಷದ ಮಾಸ್ಟರ್‌ ಮೊಹಮ್ಮದ್‌ ಯೂಸಫ್‌ ಎಂಬವರು ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ರಜಾ ಕಾಲದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದೆ. ಅರ್ಜಿದಾರ ಮಕ್ಕಳ ತಾಯಿ ಭಾರತದವರಾಗಿದ್ದು, ಷರಿಯತ್‌ ಕಾನೂನಿನ ಪ್ರಕಾರ ಪಾಕಿಸ್ತಾನದ ಪ್ರಜೆಯನ್ನು ವಿವಾಹವಾಗಿದ್ದರು. ಆದರೆ, ಪಾಕಿಸ್ತಾನದ ಪೌರತ್ವ ಪಡೆಯದೆ ಭಾರತದ ಪ್ರಜೆಯಾಗಿ ಮುಂದುವರೆದಿದ್ದಾರೆ.

ಅರ್ಜಿದಾರರು ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿರುವ ಪ್ರಜೆಗಳಾಗಿದ್ದು, ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಾಯಿಯೊಂದಿಗೆ ಜನವರಿ 4ರಂದು ವೀಸಾ ಪಡೆದು ಮೈಸೂರಿಗೆ ಬಂದಿದ್ದರು. ಜೂನ್‌ 18ರವರೆಗೂ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಜೂನ್‌ 18ರಂದು ವೀಸಾ ಅವಧಿ ಮುಕ್ತಾಯವಾಗಲಿದೆ.

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಭಾರತದಲ್ಲಿ ವೀಸಾ ಪಡೆದು ನೆಲೆಸಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ವೀಸಾ ಹಿಂದಿರುಗಿಸಿ, ಏಪ್ರಿಲ್‌ 30ರ ಅಂತ್ಯದೊಳಗಾಗಿ ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಗಡುವು ವಿಧಿಸಿತ್ತು. ಅದರಂತೆ ಅರ್ಜಿದಾರರು ಏಪ್ರಿಲ್‌ 28ರಂದು ಪಾಕಿಸ್ತಾನಕ್ಕೆ ತೆರಳಲು ಅಟ್ಟಾರಿ ಗಡಿಗೆ ಹೋಗಿದ್ದು, ಅವರನ್ನು ತಮ್ಮ ದೇಶಕ್ಕೆ ಕರೆದುಕೊಳ್ಳಲು ಯಾರೂ ಬಾರದ ಕಾರಣ ಪಾಕಿಸ್ತಾನ ಪ್ರವೇಶಕ್ಕೆ ಅವಕಾಶ ನೀಡದೇ, ಗಡಿ ದ್ವಾರವನ್ನು ಮುಚ್ಚಲಾಗಿದೆ. ಪರಿಣಾಮ ಅವರು ಮತ್ತೆ ಮೈಸೂರಿಗೆ ಹಿಂದಿರುಗಿದ್ದರು.

ಬಳಿಕ ಭಾರತದಲ್ಲಿ ಉಳಿಯಲು ದೀರ್ಘಾವಧಿ ವೀಸಾ ಮಂಜೂರು ಮಾಡುವಂತೆ ಇಲ್ಲವೇ ವೀಸಾ ಅವಧಿ ವಿಸ್ತರಣೆ ಮಾಡುವಂತೆ ಕೋರಿ ಮೈಸೂರಿನ ವಿದೇಶಿಗರ ನೋಂದಣಿ ಕಚೇರಿಗೆ ಮನವಿ ಮಾಡಿದ್ದು, ಮನವಿಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ದೇಶ ತೊರೆಯಲು ನೀಡಿರುವ ಸೂಚನೆಯಂತೆ ನಿಗದಿತ ಅವಧಿಯಲ್ಲಿ ದೇಶ ತೊರೆಯದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಆದ್ದರಿಂದ ವೀಸಾ ಅವಧಿ ವಿಸ್ತರಣೆ ಮಾಡಬೇಕು ಇಲ್ಲವೇ ಮೇ 15ರವರೆಗೂ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

Category
ಕರಾವಳಿ ತರಂಗಿಣಿ