ಬೆಂಗಳೂರು: 2024-2025ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ(sslc result) ಪ್ರಕಟವಾಗಿದೆ. ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡುತ್ತಿದ್ದಾರೆ. ಮಧ್ಯಾಹ್ನ 12.30ರ ಬಳಿಕ ಎಸ್ಎಸ್ಎಲ್ಸಿ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ(pressmeet) ಮಾಹಿತಿ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, "ಮಧ್ಯಾಹ್ನ 12.30ಕ್ಕೆ ಇಲಾಖೆ ಜಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ತರಗತಿ, ತೆರವಾಗಿರುವ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗಿತ್ತು. ಈ ಬಾರಿಯ ಫಲಿತಾಂಶದಲ್ಲಿ ಶೇ.8ರಷ್ಟು ಸುಧಾರಣೆಯಾಗಿದೆ. ಕಳೆದ ಬಾರಿ ಶೇ.53ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.66ರಷ್ಟು ಬಂದಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ಅಗ್ರಸ್ಥಾನ ಪಡೆದಿವೆ. ಕಲಬುರಗಿ ಜಿಲ್ಲೆಯು ಕೊನೆ ಸ್ಥಾನದಲ್ಲಿದೆ.
22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು, ರಾಜ್ಯಕ್ಕೆ ಟಾಪರ್ ಆಗಿ ಹೊಹೊಮ್ಮಿದ್ದಾರೆ. 65 ವಿದ್ಯಾರ್ಥಿಗಳಿಗೆ 624 ಅಂಕಗಳು ಬಂದಿವೆ. 921 ಪ್ರೌಢಶಾಲೆಗಳು ಶೇಕಡ 100ರಷ್ಟು ಫಲಿತಾಂಶ ಸಾಧಿಸಿವೆ. 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.