ಮೈಸೂರು: ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಎಂಬುದನ್ನು ಪತ್ರಿಕೆಗಳನ್ನು ನೋಡಿ ತಿಳಿದುಕೊಳ್ಳುತ್ತಿದ್ದೇನೆ. ಈಗ ಅಸತ್ಯ ಹೇಳಲು ಹೋಗುವುದಿಲ್ಲ. ಆದ್ದರಿಂದ, ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ, ಡಿಸಿಎಂ ಬಗ್ಗೆ ಆಗಲಿ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ(h.d devegouda) ತಿಳಿಸಿದ್ದಾರೆ.
ಎರಡು ದಿನದ ಮೈಸೂರು(mysore) ಜಿಲ್ಲೆಯ ಖಾಸಗಿ ಪ್ರವಾಸದ ಪ್ರಯುಕ್ತ ಜಿಲ್ಲೆಗೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾಧ್ಯಮವರೊಂದಿಗೆ(media) ಮಾತನಾಡಿ,ನಮ್ಮದು ಒಂದು ಪ್ರಾದೇಶಿಕ ಪಕ್ಷ, ಬಿಜೆಪಿ ಜೊತೆ ನಮ್ಮ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ. ಕುಮಾರಸ್ವಾಮಿಯವರ ಆರೋಗ್ಯ ಸರಿ ಇರಲಿಲ್ಲ. ಈಗ ಸರಿಯಾಗಿದೆ. ನನ್ನ ಜೊತೆ ಉಪಹಾರ ಸೇವನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಸಂಘಟನೆ ವಿಚಾರವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.
ಭಗವಂತ ನನಗೆ ಎಷ್ಟು ದಿನ ಆಯಸ್ಸು ಕೊಡುತ್ತಾನೋ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾನು ರಾಜ್ಯ ಪ್ರವಾಸ(state tour) ಮಾಡುತ್ತೇನೆ. ಪಕ್ಷಕ್ಕೆ ಹಾಗೂ ಸ್ಥಳೀಯ ನಾಯಕರಿಗೆ ಬಲ ತುಂಬುವ ಕೆಲಸ ಮಾಡುತ್ತೇನೆ ಹಾಗೂ ನಿಖಿಲ್ ಕುಮಾರಸ್ವಾಮಿ(nikhil kumarswamy) ನಾಯಕತ್ವದಲ್ಲಿ ಯುವಕರ ಗುಂಪಿನ ಜೊತೆ ಚರ್ಚೆ ಮಾಡುತ್ತೇನೆ. ನಾನು ಮತ್ತೆ ಮೈಸೂರಿಗೆ ಬರುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ನನಗೆ ಬುದ್ದಿಯ ಕೊರತೆ ಇಲ್ಲ. ಆದರೆ ಆರೋಗ್ಯದ ಸಮಸ್ಯೆ ಇದೆ. ಕಾಶ್ಮೀರದ ಪೆಹಲ್ಗಾಮ್ ಘಟನೆಯ ಬಗ್ಗೆ ಪ್ರಧಾನಿ(prime minister) ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಬೆಂಬಲ ಇದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ತೆಗೆದುಕೊಂಡ ನಿರ್ಧಾರ ಒಳ್ಳೆಯದು ಇದೆ. ದೇಶದ ಎಲ್ಲಾ ಜನರು ಈ ಘಟನೆಯನ್ನು ಖಂಡಿಸಿದ್ದಾರೆ. ಮೋದಿಯವರು ಈಗ ವಿಶ್ವನಾಯಕರಾಗಿದ್ದಾರೆ. ಭಾರತದ ನಿರ್ಧಾರಕ್ಕೆ ಅನೇಕ ದೇಶಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.
ಕಾಶ್ಮೀರದ ಉಗ್ರಗಾಮಿಗಳ ಶೋಧ ಕಾರ್ಯ ಮುಂದುವರಿದಿದೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.