image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಡ್ರೋನ್ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ಕುರಿತಂತೆ ಮರು ತನಿಖೆಗೆ ಹೈಕೋರ್ಟ್ ಆದೇಶ

ಡ್ರೋನ್ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ಕುರಿತಂತೆ ಮರು ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಡ್ರೋನ್ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ಕುರಿತಂತೆ ಮರು ತನಿಖೆಗೆ ಆದೇಶಿಸಿರುವ ಹೈಕೋರ್ಟ್, ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚನೆಗೆ ಆದೇಶಿಸಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾದ ಪ್ರಕರಣಗಳು ದೇಶದೆಲ್ಲೆಡೆ ಹೆಚ್ಚುತ್ತಿರುವುದರಿಂದ ಸೈಬರ್ ಅಪರಾಧ ತನಿಖಾ ಬ್ಯುರೋ ಸ್ಥಾಪನೆ ಮಾಡುವುದು ಒಳ್ಳೆಯದು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ತನ್ನ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದ ದತ್ತಾಂಶ ಕಳುವಾಗಿದ್ದು, ತನಿಖೆಗೆ ವಿಶೇಷ ತನಿಖಾ ದಳ ರಚನೆ ಮಾಡುವಂತೆ ಕೋರಿ ನ್ಯೂಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್ ಪ್ರವೈಟ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಡ್ರೋನ್ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ಬಗ್ಗೆ ಮರು ತನಿಖೆಗೆ ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ, ಐಪಿಎಸ್ ಅಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಮತ್ತು ನಿಷಾ ಜೇಮ್ಸ್ ಅವರ ಸಮಿತಿ ರಚಿಸಬೇಕು ಎಂದು ಸೂಚಿಸಿದೆ.

ಎಸ್ಐಟಿ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕು. ಅದಕ್ಕಾಗಿ ಈ ಆದೇಶದ ಪ್ರತಿಯನ್ನು ರಿಜಿಸ್ಟ್ರಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಕಾರ್ಯದರ್ಶಿ ಮುಂದಿಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದೆ.

ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇಂತಹ ಅಪರಾಧಗಳು ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ 'ಸೈಬರ್ ಬೇಹುಗಾರಿಕೆ' ಎಂದು ಕರೆದ ನ್ಯಾಯಾಲಯ, ಸೈಬರ್ ಅಪರಾಧಗಳನ್ನು ನಿಭಾಯಿಸುವಲ್ಲಿ ಸಾಂಪ್ರದಾಯಿಕ ಪೊಲೀಸಿಂಗ್ ವಿಧಾನಗಳ ಅಸಮರ್ಪಕವಾಗಿದೆ ಮತ್ತು ಅದಕ್ಕಾಗಿ ಸೈಬರ್ ಅಪರಾಧಗಳಿಗೆ ಮೀಸಲಾದ ಸೈಬರ್ ಅಪರಾಧ ತನಿಖಾ ಬ್ಯೂರೋವನ್ನು ಸ್ಥಾಪಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿತು.

ಸಂಕೀರ್ಣ ಸೈಬರ್ ಅಪರಾಧಗಳಲ್ಲಿ ಸಾಮಾನ್ಯ ತನಿಖೆಗಳಿಂದ ಏನೂ ಪ್ರಯೋಜನವಿಲ್ಲ, ಅದು ನ್ಯಾಯದ ಉಲ್ಲಂಘನೆಗೆ ಸಮಾನವಾಗಿರುತ್ತದೆ. ಜತೆಗೆ ಇಂದಿನ ಸಾಕಷ್ಟು ತನಿಖಾದಿಕಾರಿಗಳಿಗೆ ತಾಂತ್ರಿಕ ನೈಪುಣ್ಯತೆ ಇಲ್ಲ. ಹಾಗಾಗಿ ತಾಂತ್ರಿಕ ಪರಿಣತಿ ಮತ್ತು ವಿಧಿ ವಿಜ್ಞಾನದ ಕುಶಾಗ್ರಮತಿ ಹೊಂದಿರುವ ಅಧಿಕಾರಿಗಳು ಮಾತ್ರ ಉದಯೋನ್ಮುಖ ಡಿಜಿಟಲ್ ಹಾಗೂ ಸೈಬರ್ ಅಪರಾಧಗಳನ್ನು ತನಿಖೆ ಮಾಡಬೇಕು ಎಂದು ಹೇಳಿದೆ.

ಆಧುನಿಕ ಯುಗದಲ್ಲಿಅಪರಾಧಗಳು ಸಫಿಸ್ಟಿಕೇಟೆಡ್ ಆಗಿರುತ್ತವೆ, ಅದಕ್ಕೆ ತಕ್ಕಂತೆ ತನಿಖಾಧಿಕಾರಿಗಳು ಸಹ ಇರಬೇಕು. ಡಿಜಿಟಲ್ ಜಗತ್ತಿನಲ್ಲಿ ಕುಳಿತಲ್ಲೇ ಬಟನ್ ಕ್ಲಿಕ್ ಮಾಡಿ ಏನು ಬೇಕಾದರೂ ಮಾಡಬಹುದು. ಈಗ ಮಾಹಿತಿಯೇ ಆಧುನಿಕ ನಾಗರಿಕತೆಯ ಜೀವನಾಡಿಯಾಗಿದೆ. ಸರ್ಕಾರ ಸೈಬರ್ ಅಪರಾಧಗಳನ್ನು ಹತ್ತಿಕ್ಕಲು ಈಗ ಕಮಾಂಡ್ ಸೆಂಟರ್ ಆರಂಭಿಸಿದ್ದರೂ ಅದು ಸಾಲದು. ಹಾಗಾಗಿ ಸಿಸಿಬಿಯಂತೆ ಸೈಬರ್ ಅಪರಾಧದ ತನಿಖೆಗೆ ಬ್ಯುರೋ ರಚಿಸುವುದು ಸೂಕ್ತ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

 

Category
ಕರಾವಳಿ ತರಂಗಿಣಿ