ಮೈಸೂರು: ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಬೇಕು ಎಂಬ ಕ್ರಿಕೆಟ್ ಪ್ರೇಮಿಗಳ ಕನಸು ಈಗ ಸಾಕಾರಗೊಳ್ಳಲಿದೆ. ಇದಕ್ಕೆ ಕಾರಣಕರ್ತರಾಗಿರುವವರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಕಳೆದ ಕೆಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕ್ರೀಡಾಂಗಣಕ್ಕೆ ಭೂಮಿ ಮಂಜೂರಾತಿ ಪ್ರಕ್ರಿಯೆಗೆ ಮರು ಚಾಲನೆ ನೀಡಿದ ಸಂಸದ ಯದುವೀರ್ ಒಡೆಯರ್ ಅವರ ಸತತ ಪ್ರಯತ್ನದಿಂದ ಈಗ ಮೈಸೂರಿನ ಇಲವಾಲ ಹೋಬಳಿಯ ಹುಯಿಲಾಳು ಗ್ರಾಮದಲ್ಲಿ ಅಗತ್ಯ ಜಮೀನು ನೀಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೈಸೂರಿನ ಸಂಸದರಾಗಿ ಆಯ್ಕೆಯಾದ ಯದುವೀರ್ ಒಡೆಯರ್ ನಿರಂತರವಾಗಿ ಈ ವಿಷಯದ ಕುರಿತು ಪ್ರಯತ್ನ ಹೂಡಿದರು. ಇದು ಈಗ ಯಶಸ್ವಿಯಾಗಿದೆ.
ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಸಂಸದ ಯದುವೀರ್ ಒಡೆಯರ್: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ವೀಕ್ಷಿಸಬೇಕು ಎಂಬ ಮೈಸೂರಿಗರ ಕನಸು ನನಸು ಮಾಡಬೇಕೆಂಬ ತುಡಿತವಿತ್ತು. ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ಮೈದಾನ ನಿರ್ಮಿಸಬೇಕು ಎಂಬ ಪ್ರಕ್ರಿಯೆ ಕಳೆದ ಕೆಲ ವರ್ಷದಿಂದ ಸ್ಥಗಿತಗೊಂಡಿತ್ತು. ಇದಕ್ಕೆ ಮರು ಚಾಲನೆ ನೀಡಲು ನಿರ್ಧರಿಸಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿದೆ ಎಂದು ತಿಳಿಸಿದ್ದಾರೆ. ಈ ಕುರಿತು ನಿರಂತರ ಮನವಿ ಸಲ್ಲಿಸಲಾಯಿತು. ಚಾಮರಾಜನಗರದಲ್ಲಿ ನಡೆದ ವಿಶೇಷ ಸಚಿವ ಸಂಪುಟದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಜಮೀನು ನೀಡಲು ನಿರ್ಧರಿಸಲಾಗಿದೆ. ಇದು ಮೈಸೂರಿಗೆ ಅತ್ಯಂತ ಖುಷಿ ನೀಡುವ ವಿಚಾರವಾಗಿದೆ ಎಂದು ಸಂಸದರು ಹೇಳಿದ್ದಾರೆ.
ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಬೇಕೆಂಬ ಪ್ರಕ್ರಿಯೆಯಲ್ಲಿ ಜಮೀನು ಮಂಜೂರಾತಿಯ ಮೊದಲ ಹಂತ ಪೂರ್ಣಗೊಂಡಿದೆ. ಭೂ ಸ್ವಾಧೀನ ಹಾಗೂ ಇನ್ನಿತರ ಕಾರ್ಯಗಳು ತ್ವರಿತ ಗತಿಯಲ್ಲಿ ಕೈಗೊಳ್ಳಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ. ಸಾಂಸ್ಕೃತಿಕ ರಾಜಧಾನಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳಬೇಕು. ಈ ನಿಟ್ಟಿನ್ಲಲಿ ಎಲ್ಲರೂ ಕೈ ಜೋಡಿಸಿ ಶ್ರಮಿಸೋಣ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.