ಧಾರವಾಡ: ಮೃತರ ಪತ್ನಿಗೆ ರೂ.15 ಲಕ್ಷ ವಿಮಾ ಹಣ ಕೊಡಲು ನಿರಾಕರಿಸಿದ ವಿಮಾ ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಹೊಸಕೇರಿ ನಿವಾಸಿ ಹನುಮಂತ ಎಂಬುವರು 2022ರ ಜ.10 ರಂದು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು.
ಈ ವಾಹನಕ್ಕೆ ಮೃತರು ಹೆಚ್ಡಿಎಫ್ಸಿ ಏರಗೋ ಕಂಪನಿಯಿಂದ ವಿಮೆ ಮಾಡಿಸಿದ್ದರು. ಅದರಲ್ಲಿ ವಾಹನದ ಮಾಲೀಕ, ಸವಾರನಿಗೆ 15 ಲಕ್ಷ ರೂ ಮೊತ್ತದ ವಿಮಾ ಕವರೇಜ್ ಸೇರಿತ್ತು. ಹನುಮಂತ ಅವರು ಅಪಘಾತದಲ್ಲಿ ಮೃತಪಟ್ಟ ನಂತರ ಅವರ ಹೆಂಡತಿ ರೋಜಾ ವಿಮೆ ಪರಿಹಾರ ಕೊಡುವಂತೆ ದಾಖಲೆಗಳ ಸಮೇತ ವಿಮಾ ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ದೂರುದಾರರ ಕ್ಲೇಮ್ ಅನ್ನು ವಿಮಾ ಕಂಪನಿಯವರು ತಿರಸ್ಕರಿಸಿದ್ದರು.
ವಿಮಾ ಕಂಪನಿಯ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ, ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ದೂರುದಾರ ಮಹಿಳೆಯು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2024ರ ಆಗಸ್ಟ್ 27 ರಂದು ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗವು, "ದೂರುದಾರರು ಮೃತ ಹನುಮಂತಪ್ಪನ ಹೆಂಡತಿ. ಮೃತ ತನ್ನ ದ್ವಿ ಚಕ್ರ ವಾಹನಕ್ಕೆ ಪ್ರೀಮಿಯಮ್ ಕಟ್ಟಿ ವಿಮಾ ಕಂಪನಿಯಿಂದ ವಿಮೆ ಪಡೆದಿದ್ದಾರೆ. ಆ ವಿಮೆ ಅಪಘಾತ ಮತ್ತು ಮೃತನ ಸಾವಿನ ಕಾಲಕ್ಕೆ ಚಾಲ್ತಿಯಿರುತ್ತದೆ. ವಿಮೆಯಲ್ಲಿ ಮೃತ ಮಾಲೀಕ, ಸವಾರನ ರಕ್ಷಣೆಗಾಗಿ 15 ಲಕ್ಷ ರೂ ಮೊತ್ತಕ್ಕೆ ಪಿ.ಎ. ಕವರೇಜ್ ಆಗಿರುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ಮೃತ ಅಪಘಾತದಲ್ಲಿ ಸಾವನ್ನಪ್ಪಿದ ಕಾರಣಕ್ಕಾಗಿ ನಾಮಿನಿಯಾಗಿರುವ ದೂರುದಾರರಿಗೆ15 ಲಕ್ಷ ಪರಿಹಾರ ಕೊಡುವುದು ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆದರೆ ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಪರಿಣಾಮವಾಗಿ ವಿಮಾ ಕಂಪನಿಯವರು ದೂರುದಾರರಿಗೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ವಿಮಾ ಕಂಪನಿಯು 15 ಲಕ್ಷ ಪರಿಹಾರ ಮತ್ತು ಅದರ ಮೇಲೆ ದೂರು ದಾಖಲಿಸಿದಾಗಿನಿಂದ ಶೇ.10 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ 50,000 ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ 10,000 ಕೊಡುವಂತೆ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.