image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಇಹಲೋಕ ತ್ಯಜಿಸಿದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಮುಖ್ಯಸ್ಥ ಡಾ.ಕೆ.ಕಸ್ತೂರಿರಂಗನ್ ...

ಇಹಲೋಕ ತ್ಯಜಿಸಿದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಮುಖ್ಯಸ್ಥ ಡಾ.ಕೆ.ಕಸ್ತೂರಿರಂಗನ್ ...

ಬೆಂಗಳೂರು: ಇಸ್ರೋ ಮಾಜಿ ಮುಖ್ಯಸ್ಥ, ಖ್ಯಾತ ಬಾಹ್ಯಾಕಾಶ ವಿಜ್ಞಾನಿ, 'ಪದ್ಮವಿಭೂಷಣ' ಪ್ರಶಸ್ತಿ ಪುರಸ್ಕೃತ ಡಾ.ಕೆ.ಕಸ್ತೂರಿರಂಗನ್ (84) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಭಾನುವಾರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಸ್ತೂರಿರಂಗನ್ 1994ರಿಂದ 2003ರ ಅವಧಿಯಲ್ಲಿ 9 ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಇಸ್ರೋ ಹಲವು ಸಾಧನೆಗಳನ್ನು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾರತದ ಪ್ರತಿಷ್ಠಿತ ಉಡಾವಣಾ ವಾಹನವಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯಶಸ್ವಿ ಉಡಾವಣೆಯ ಜೊತೆಗೆ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ)ನ ಮೊದಲ ಯಶಸ್ವಿ ಹಾರಾಟ ಪರೀಕ್ಷೆಯೂ ಸೇರಿದಂತೆ ಹಲವಾರು ಪ್ರಮುಖ ಮೈಲಿಗಲ್ಲುಗಳಿಗೆ ಇವರು ಸಾಕ್ಷಿಯಾಗಿದ್ದರು.

ಇಸ್ರೋ ಮುಖ್ಯಸ್ಥರಾಗುವ ಮುನ್ನ ಕಸ್ತೂರಿರಂಗನ್ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು. ಈ ಅವಧಿಯಲ್ಲಿ ನೂತನ ಬಾಹ್ಯಾಕಾಶ ನೌಕೆ, ಇನ್​ಸ್ಯಾಟ್-2 ಮತ್ತು ಭಾರತೀಯ ದೂರಸಂವೇದಿ ಉಪಗ್ರಹಗಳ (IRS-1A & 1B) ಹಾಗೂ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಹಾಗೆಯೇ ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ್-I & II ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ವಿಶ್ವದ ಅತ್ಯುತ್ತಮ ನಾಗರಿಕ ಉಪಗ್ರಹಗಳಾದ ಐಆರ್‌ಎಸ್-1ಸಿ ಮತ್ತು 1ಡಿ ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉಡಾವಣೆ, ಎರಡು ಮತ್ತು ಮೂರನೇ ತಲೆಮಾರಿನ ಇನ್‌ಸಾಟ್ ಉಪಗ್ರಹಗಳು, ಸಾಗರ ವೀಕ್ಷಣಾ ಉಪಗ್ರಹಗಳಾದ ಐಆರ್‌ಎಸ್-ಪಿ3/ಪಿ4 ಅನ್ನು ಯಶಸ್ವಿ ಉಡಾವಣೆ ಮಾಡುವ ಮೂಲಕ ಭಾರತ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಮೊದಲ ಆರು ದೇಶಗಳಲ್ಲಿ ಒಂದಾಯಿತು. ಇಸ್ರೋ ಈ ಮೈಲಿಗಲ್ಲು ಸಾಧಿಸಲು ಕಸ್ತೂರಿರಂಗನ್ ಪ್ರಮುಖ ಪಾತ್ರವಹಿಸಿದ್ದರು.

ಸದ್ಯ ಯೋಜನಾ ಆಯೋಗದ ಸದಸ್ಯರೂ ಆಗಿದ್ದ ಇವರು ಜವಾಹರಲಾಲ್ ನೆಹರೂ ವಿವಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯಸಭೆ (2003-2009) ಸದಸ್ಯರಾಗಿಯೂ ಆಯ್ಕೆ ಆಗಿದ್ದರು.

Category
ಕರಾವಳಿ ತರಂಗಿಣಿ