ಬೆಂಗಳೂರು: ಜಮ್ಮು ಕಾಶ್ಮೀರ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಗುರುತು ಪತ್ತೆ ನಡೆಯುತ್ತಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಣಿವೆನಾಡಿಗೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾಶ್ಮೀರಕ್ಕೆ ತೆರಳಿರುವ ಲಾಡ್, ತೊಂದರೆಗೊಳಗಾದ ಕನ್ನಡಿಗರ ನೆರವಿಗೆ ನಿಂತಿದ್ದಾರೆ.
ಪಹಲ್ಗಾಮ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಮೃತರ ಸಂಬಂಧಿಕರೊಂದಿಗೆ ಪಾರ್ಥಿವ ಶರೀರಗಳನ್ನು ಗುರುತಿಸಲು ಸಂತೋಷ್ ಲಾಡ್ ನೆರವಾಗಿದ್ದಾರೆ. ಮೃತದೇಹಗಳು ನಿಮ್ಮ ಸಂಬಂಧಿಕರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಎಷ್ಟು ಜನ ಬಂದಿದ್ದೀರಿ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾವ ಮೃತದೇಹಗಳನ್ನು ಈಗಾಗಲೇ ನೋಡಲಾಗಿದೆ ಎಂಬುದನ್ನೂ ಸಹ ಅವರು ತಪಾಸಣೆ ಮಾಡುತ್ತಿದ್ದು,ಮೃತದೇಹಗಳನ್ನು ಇರಿಸಲಾಗಿರುವ ಪೆಟ್ಟಿಗೆಗಳ ಮೇಲೆ ದೂರವಾಣಿ ಕರೆಗಳನ್ನು ನಮೂದಿಸಲಾಗಿದ್ದು, ಸಂಬಂಧಿಕರಿಗೆ ಕರೆ ಮಾಡಿ ಸ್ವತಃ ಸಂತೋಷ್ ಲಾಡ್ ಅವರೇ ತಿಳಿಸುತ್ತಿದ್ದಾರೆ. ''ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಎಲ್ಲಾ ವ್ಯವಸ್ಥೆ ಮಾಡಲಾಗುವುದು. ತೊಂದರೆಗೊಳಗಾದವರಿಗೆ ಅಗತ್ಯ ನೆರವು ನೀಡಲಾಗುವುದು. ನಮ್ಮ ಸರ್ಕಾರ ಏಲ್ಲ ರೀತಿಯಲ್ಲಿ ಸಹಾಯ ಮಾಡಲಿದೆ" ಎಂದು ಸಚಿವ ಲಾಡ್ ತಿಳಿಸಿದ್ದಾರೆ.
ಇಬ್ಬರ ಗುರುತು ಪತ್ತೆ: ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗ ಮತ್ತು ರಾಣೆಬೆನ್ನೂರಿನ ಇಬ್ಬರು ಪ್ರವಾಸಿಗರ ಗುರುತು ಪತ್ತೆಯಾಗಿದ್ದು, ಇನ್ನೂ ಒಬ್ಬರ ಗುರುತು ಸಿಗಬೇಕಿದೆ.
ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ರಾಜ್ಯಕ್ಕೆ ಮರಳಿ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರವಾಸಿ ಕಾರ್ಯಾಚರಣೆದಾರರು (Tour Operators & Travel Agents) ತಮ್ಮ ಮೂಲಕ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಈ ಕೆಳಕಂಡ ಸಹಾಯವಾಣಿಗೆ (Helpline) ನೀಡಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಸಹಾಯವಾಣಿ ಸಂಖ್ಯೆಗಳು ಇಂತಿವೆ : 080-43344334, 080-43344335, 080-43344336 ಹಾಗೂ 080-43344342