image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

''ಗೈಡೆಡ್ ಟೂರ್​" ನಡಿ ವಿಧಾನಸೌಧ ಪ್ರವೇಶಕ್ಕೆ ಪ್ರವಾಸಿಗರಿಗೆ ತಲಾ 150ರೂ. ಪ್ರವೇಶ ಶುಲ್ಕ : ಯು. ಟಿ ಖಾದರ್ ಕಿಡಿ

''ಗೈಡೆಡ್ ಟೂರ್​" ನಡಿ ವಿಧಾನಸೌಧ ಪ್ರವೇಶಕ್ಕೆ ಪ್ರವಾಸಿಗರಿಗೆ ತಲಾ 150ರೂ. ಪ್ರವೇಶ ಶುಲ್ಕ : ಯು. ಟಿ ಖಾದರ್ ಕಿಡಿ

ಬೆಂಗಳೂರು: ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ಶುಲ್ಕ ನಿಗದಿ ಮಾಡಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಅದರಂತೆ ಪ್ರವಾಸೋದ್ಯಮ ಇಲಾಖೆ ವಿಧಾನಸೌಧಕ್ಕೆ ಗೈಡೆಡ್ ಟೂರ್​ಗೆ ಪ್ರತಿ ವ್ಯಕ್ತಿಗೆ ತಲಾ 150 ರೂ. ನಿಗದಿ ಪಡಿಸುವ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆ ಮಾಡಿದೆ. ಇಷ್ಟು ದುಬಾರಿ ಪ್ರವೇಶ ಶುಲ್ಕಕ್ಕೆ ಸ್ಪೀಕರ್ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧ ಬೆಂಗಳೂರು ನಗರದ ಆಕರ್ಷಣೀಯ ಪ್ರವಾಸಿ ತಾಣ. ಕರ್ನಾಟಕ ರಾಜ್ಯದ ಸುಂದರ ವಿನ್ಯಾಸದ ಆಡಳಿತ ಸೌಧವನ್ನು ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಬೆಂಗಳೂರಿಗೆ ಬರುವ ಪ್ರವಾಸಿಗರು ವಿಧಾನಸೌಧ ನೋಡದೇ ತೆರಳುವುದಿಲ್ಲ.‌ ಬೆಂಗಳೂರು ನಗರದಲ್ಲಿ ವಿಧಾನಸೌಧದ ವಿಹಂಗಮ ನೋಟವನ್ನು ನೋಡಲು ಅನೇಕ ಜನರು ಆಗಮಿಸುತ್ತಾರೆ. ವಿಧಾನಸೌಧ ಆವರಣದ ಮುಂಭಾಗದ ರಸ್ತೆ ಬದಿ ನಿಂತು ಸೆಲ್ಫಿ, ಫೋಟೋ ಸೆಷನ್​ಗಳನ್ನು ಮಾಡಿ ಅದ್ಭುತ ಕಟ್ಟಡದ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ವಿಧಾನಸೌಧ ಕಟ್ಟಡಕ್ಕೆ ಇದೀಗ ಶಾಶ್ವತ ದೀಪಾಲಂಕಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದರಿಂದ ಕಟ್ಟಡದ ಸೌಂದರ್ಯ ಹೆಚ್ಚುವುದರ ಮೂಲಕ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರು ವಿಧಾನಸೌಧಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಪ್ರತಿ ಪ್ರವಾಸಿಗರು ಕಟ್ಟಡದ ಹೊರ ಭಾಗದಲ್ಲಿ ನಿಂತು ವೀಕ್ಷಣೆ ಮಾಡಿ ಛಾಯಾ ಚಿತ್ರ ತೆಗೆದುಕೊಳ್ಳುತ್ತಾರೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕಟ್ಟಡದ ಪಾರಂಪರಿಕತೆ, ಇತಿಹಾಸ ಹಾಗೂ ಮಹತ್ವವನ್ನು ತಿಳಿಸುವ ಮೂಲಕ ಕಟ್ಟಡದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ದೆಹಲಿಯ ರಾಷ್ಟ್ರಪತಿ ಭವನ, ಪಾರ್ಲಿಮೆಂಟ್ ಕಟ್ಟಡಗಳಿಗೆ ಏರ್ಪಡಿಸಿರುವಂತೆ ವಿಧಾನಸೌಧಕ್ಕೂ "Guided Tour" ಏರ್ಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈ ಸಂಬಂಧ ವಿಧಾನಸೌಧಕ್ಕೆ "Guided Tour" ವ್ಯವಸ್ಥೆ ಕಲ್ಪಿಸಲು ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪಿಸಿದೆ. ಇದಕ್ಕೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದೆ.

ಸ್ಪೀಕರ್ ಯು.ಟಿ. ಖಾದರ್ ಪ್ರವಾಸಿಗರಿಗೆ ತಲಾ 150 ರೂ. ನಿಗದಿ ಮಾಡುವ ಪ್ರವಾಸೋದ್ಯಮದ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ದುಬಾರಿ ಪ್ರವೇಶ ಶುಲ್ಕ ಪ್ರವಾಸಿಗರಿಗೆ ಹೊರೆ ಬೀಳಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, 150 ರೂ. ಶುಲ್ಕದ ಪ್ರಸ್ತಾವನೆಗೆ ಆಕ್ಷೇಪಿಸಿದ್ದಾರೆ. ದುಬಾರಿ ಶುಲ್ಕವನ್ನು ಪರಿಷ್ಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಪ್ರವಾಸಿಗರಿಗೆ ತಲಾ 20 ರೂ. ಶುಲ್ಕ ನಿಗದಿಪಡಿಸುವಂತೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಇದರಿಂದ ಪ್ರವಾಸಿಗರಿಗೂ ಹೊರೆಯಾಗುವುದಿಲ್ಲ. 150 ರೂ. ಪ್ರವೇಶ ಶುಲ್ಕದಿಂದ ಜನ ಸಾಮಾನ್ಯರಿಗೆ ತೀವ್ರ ಹೊರೆಯಾಗಲಿದೆ. ಹೀಗಾಗಿ ಜನಸಮಾನ್ಯರಿಗೆ ಹೊರೆಯಾಗದಂತೆ ಕನಿಷ್ಠ ಶುಲ್ಕ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಸ್ಪೀಕರ್ ಯು.ಟಿ. ಖಾದರ್ ಪತ್ರ ಬರೆದಿದ್ದಾರೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ವಿಧಾನಸೌಧ ಪ್ರವೇಶ ಶುಲ್ಕ ಪ್ರಸ್ತಾವನೆ ಸಂಬಂಧ ಚರ್ಚೆ ನಡೆಯಲಿದೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಲ್ಲಿಸಿರುವ ಗೈಡೆಡ್​ ಟೂರ್ ಪ್ರವಾಸಿಗರಿಗೆ ತಲಾ 150 ರೂ. ಪ್ರವೇಶ ಶುಲ್ಕ, 20-50 ರೂ. ಕನಿಷ್ಠ ಶುಲ್ಕ ಹಾಗೂ ಉಚಿತ ಪ್ರವೇಶದ ಪ್ರಸ್ತಾವನೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

Category
ಕರಾವಳಿ ತರಂಗಿಣಿ