image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಮಗೆ ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಇನ್ನೂ ಸಿಕ್ಕಿಲ್ಲ: ಸಿಎಂ ಸಿದ್ದರಾಮಯ್ಯ

ನಮಗೆ ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಇನ್ನೂ ಸಿಕ್ಕಿಲ್ಲ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ''ನನ್ನ ಅವಧಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಲು, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ, ಎಲ್ಲರನ್ನೂ ಮುಖ್ಯ ವಾಹಿನಿಗೆ ತರಲು ಮತ್ತು ಸಂಪತ್ತನ್ನು ಹಂಚಿಕೆ ಮಾಡಲು ನಾನು ಪ್ರಯತ್ನ ಮಾಡುತ್ತಿದ್ದೇನೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕೋಡಿ ಪಟ್ಟಣದಲ್ಲಿ ಯಾದವ-ಗೊಲ್ಲರ ಸಮುದಾಯ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ''1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆತಿದೆ. ಆದರೆ ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಿಕ್ಕಿದೆ, ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ನಮಗೆ ಸಿಕ್ಕಿಲ್ಲ. ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಸಿಕ್ಕರೆ ಮಾತ್ರ ನಾವು ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಇಲ್ಲದಿದ್ದರೆ ಅಸಮಾನತೆ ಎಂಬುದು ಹೀಗೆಯೇ ಮುಂದುವರೆಯುತ್ತದೆ. ಯಾರು ಅಸಮಾನತೆಯಿಂದ ನರಳುತ್ತಿದ್ದಾರೋ ಅವರೇ ಸ್ವಾತಂತ್ರ್ಯ ಸೌಧವನ್ನು ದಮನ ಮಾಡುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ, ನನ್ನ ಅವಧಿಯಲ್ಲಿ ಎಲ್ಲರನ್ನೂ ಮುಖ್ಯವಾಹಿನಿಗೆ ತರಲು, ಸಮಾನ ಅವಕಾಶ ಕಲ್ಪಿಸಲು ಪ್ರಯತ್ನ ಮಾಡುತ್ತಿರುವೆ'' ಎಂದು ಹೇಳಿದರು.

''ಶ್ರೀಕೃಷ್ಣ ಯಾದವ ಜನಾಂಗದಲ್ಲಿ ಹುಟ್ಟಿದವರು. ಯಾದವ ಜಾತಿ ಅನೇಕ ಉಪಜಾತಿ, ಪಂಗಡಗಳಿಂದ ಕೂಡಿದೆ. ನಮ್ಮ ಜಾತಿಗಳು ನಿರ್ಮಾಣವಾಗಿದ್ದೇ ಕಸುಬುಗಳಿಂದ. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ‌, ಹೋರಾಟ ಎಂಬ ಮೂರು ಮಂತ್ರಗಳನ್ನು ಹೇಳಿಕೊಟ್ಟು ಹೋದರು. ಹಿಂದಿನ ಸಮಾಜದಲ್ಲಿ ಚತುರ್ವಣ ಪದ್ಧತಿ ಜಾರಿಯಲ್ಲಿತ್ತು. ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶವಿರಲಿಲ್ಲ. ಯಾರು ವಿದ್ಯೆ ಕಲಿತಿದ್ದರೋ ಅವರೆಲ್ಲರೂ ಆಸ್ತಿ ಗಳಿಸಿದ್ದರು. ವಿದ್ಯೆ ಇಲ್ಲದವರೆಲ್ಲ ಹಿಂದುಳಿದವರಾದರು. ಇದರಿಂದಲೇ ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿದೆ'' ಎಂದು ಅಭಿಪ್ರಾಯಪಟ್ಟರು.

''ಎಲ್ಲ ಜಾತಿಯ ಬಡವರಿಗೂ ಅವಕಾಶ ಸಿಗುವ ಹೋರಾಟ ಮಾಡಬೇಕು. 1921ರಲ್ಲಿ ಮಿಲ್ಲರ್ ವರದಿ ಬಂತು, ನಾಗರಗೌಡ, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ, ದ್ವಾರಕನಾಥ್, ರವಿಕುಮಾರ್ ವರದಿಗಳು ಬಂದವು. ಈಗ ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ವರದಿಗಳು ಬಂದಿವೆ. ಈ ವರದಿಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು, ಓದಿಕೊಳ್ಳಬೇಕು. ಇಲ್ಲವಾದರೆ ಗುಲಾಮಗಿರಿತನ ಬರುತ್ತೆ, ಸ್ವಾಭಿಮಾನ ಇರಲ್ಲ. ನಾನು ಸಿಎಂ ಆಗಿರುವುದು ನನ್ನ ವಿದ್ಯೆಯಿಂದ'' ಎಂದು ಸಿಎಂ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.

''ಸ್ವಾತಂತ್ರ್ಯ ಪೂರ್ವದಲ್ಲಿ ಮನು ಸ್ಮೃತಿ ಇತ್ತು. ಗೊಲ್ಲರು ಹಾಲು ಕರಿಯಬೇಕಾ, ನಾನು ಕುರಿ ಕಾಯಕೊಂಡೇ ಇರಬೇಕಿತ್ತಾ? ಕುರುಬರು, ಗೊಲ್ಲರು ಒಂದೇ ವರ್ಗಕ್ಕೆ ಸೇರಿದವರು. ಅವರೂ ಅಭಿವೃದ್ಧಿ ನಿಗಮ ಕೇಳಿದ್ದಾರೆ. ಸಮಾಜಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತೇನೆ. ದಯೆಯೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಯಾವುದಯ್ಯ'' ಎಂದು ಸಿಎಂ ತಮ್ಮ ಭಾಷಣ ಮುಗಿಸಿದರು.

Category
ಕರಾವಳಿ ತರಂಗಿಣಿ