image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೂರು ದಶಕ ದಿನಗೂಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿದ ನೌಕರರಿಗೆ ಮೂರು ತಿಂಗಳಲ್ಲಿ ಪಿಂಚಣಿ ನೀಡಲು ಆದೇಶಿಸಿದ ಹೈ ಕೋರ್ಟ್

ಮೂರು ದಶಕ ದಿನಗೂಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿದ ನೌಕರರಿಗೆ ಮೂರು ತಿಂಗಳಲ್ಲಿ ಪಿಂಚಣಿ ನೀಡಲು ಆದೇಶಿಸಿದ ಹೈ ಕೋರ್ಟ್

ಬೆಂಗಳೂರು: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಸುಮಾರು ಮೂರು ದಶಕ ಸೇವೆ ಸಲ್ಲಿಸಿದ 14 ಜನ ನೌಕರರಿಗೆ ಮೂರು ತಿಂಗಳಲ್ಲಿ ಪಿಂಚಣಿ ಸೌಲಭ್ಯ ನೀಡುವಂತೆ ಹೈಕೋರ್ಟ್ ತಾಕೀತು ಮಾಡಿದೆ.

ಕಾಳಪ್ಪ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಹದಿನಾಲ್ಕು ನೌಕರರಿಗೆ ಪಿಂಚಣಿ ನೀಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ (ಕೆಎಟಿ) ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆಯುಕ್ತರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.

ಪಿಂಚಣಿ ಸೌಲಭ್ಯ ಪಡೆದಿರುವ ಸರ್ಕಾರದ ಇತರೆ ನೌಕರರಂತೆಯೇ ಕಾಳಪ್ಪ ಮತ್ತಿತರ ನೌಕರರು 30 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಇತರೆ ಉದ್ಯೋಗಿಗಳಿಗೆ ಕಲ್ಪಿಸಿರುವ ಪಿಂಚಣಿ ಸೌಲಭ್ಯವನ್ನು ಕಾಳಪ್ಪ ಮತ್ತಿತರರಿಗೆ ನಿರಾಕರಿಸುವುದು ತಾರತಮ್ಯವಾಗಿದೆ. ಸಂವಿಧಾನದ ಪರಿಚ್ಛೇದ 14 (ಸಮಾನತೆ) ಮತ್ತು 16 (ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ) ಅನ್ವಯ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿ ಅಥವಾ ಸಮೂಹವನ್ನು ತಾರತಮ್ಯ ಮಾಡುವಂತಿಲ್ಲ. ಸಾರ್ವಜನಿಕ ಉದ್ಯೋಗದಲ್ಲಿ ಸಮಾನತೆ ಹಾಗೂ ಸಮಾನ ಅವಕಾಶ ಕಾಯ್ದುಕೊಳ್ಳಬೇಕಾಗುತ್ತದೆ. ಸರ್ಕಾರದ ಇತರೆ ನೌಕರರಂತೆ ಕಾಳಪ್ಪ ಮತ್ತಿತರರನ್ನು ಪರಿಗಣಿಸಬೇಕಿದೆ. ಅವರಿಗೆ ಮೂರು ತಿಂಗಳಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಹಾಗೂ ಹಿಂಬಾಕಿ ಪಾವತಿಸಬೇಕು. ಕಾಳಪ್ಪ ಅವರ ಮಾದರಿಯಲ್ಲಿ ನಿಯೋಜಿಸಲಾದ ಇತರೆ ನೌಕರರಿಗೂ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಪೀಠ ಆದೇಶಿಸಿದೆ.

ಚಿಕ್ಕಮಗಳೂರಿನ ಕಾಳಪ್ಪ (80), ಸಬ್ಜನ್‌ (73) ಮತ್ತು ಅಂಜಪ್ಪ (75) ಸೇರಿದಂತೆ 14 ನೌಕರರು 1963ರಿಂದ 69ರ ಅವಧಿಯಲ್ಲಿ ಚಿಕ್ಕಮಗಳೂರು ಅಜ್ಜಂಪುರ ಗ್ರಾಮದ ಅಮೃತ್‌ ಮಹಲ್‌ ಜಾನುವಾರು ತಳಿ ಅಭಿವೃದ್ಧಿ ಕೇಂದ್ರಕ್ಕೆ ದಿನಗೂಲಿ ನೌಕರರಾಗಿ ನೇಮಕಗೊಂಡಿದ್ದರು. ಕೆಲ ಸಮಯದ ನಂತರ ಅವರನ್ನು ತಿಂಗಳ ಪಾವತಿ ಕಾರ್ಮಿಕರಾಗಿ ಬದಲಾವಣೆ ಮಾಡಲಾಗಿತ್ತು. ಅವರೆಲ್ಲರೂ ಮೂರು ದಶಕಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ನಿವೃತ್ತಿ ನಂತರ ಸರ್ಕಾರದ ಇತರೆ ನೌಕರರಿಗೆ ನೀಡುವಂತೆ ತಮಗೂ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆ ಮನವಿಯನ್ನು ಸರ್ಕಾರ ತಿರಸ್ಕರಿಸಿದ್ದರಿಂದ 2017ರಲ್ಲಿ ನೌಕರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳನ್ನು ಪುರಸ್ಕರಿಸಿದ್ದ ಕೆಎಟಿ, ಸರ್ಕಾರದ ಇತರೆ ನೌಕರರಿಗೆ ನೀಡುವಂತೆ ಅರ್ಜಿದಾರ ನೌಕರರಿಗೂ ಪಿಂಚಣಿ ನೀಡುವಂತೆ 2019ರಲ್ಲಿ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ರದ್ದು ಕೋರಿ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆಯುಕ್ತರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

Category
ಕರಾವಳಿ ತರಂಗಿಣಿ