image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಪ್ರಯತ್ನ -ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಪ್ರಯತ್ನ -ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ''ಕರ್ನಾಟಕ ಸರ್ಕಾರವನ್ನು ಕೆಡವಲು ಪ್ರಯತ್ನ ನಡೆದಿದೆ. ಹೀಗಾಗಿ, ನೀವು ಎಲ್ಲರೂ ಹುಷಾರಾಗಿ, ಬೇಧ - ಭಾವ ಬಿಟ್ಟು ಒಂದಾಗಿ ಇರಬೇಕು. ಇಲ್ಲದಿದ್ದರೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿಕೊಂಡು ಕರ್ನಾಟಕದ ಬಡ ಜನರನ್ನು ನುಂಗುತ್ತಾರೆ. ಅಧಿಕಾರ ಕೊಟ್ಟಿರುವ ಜನರನ್ನು ರಕ್ಷಿಸುವ ಜವಾಬ್ದಾರಿ ನಿಮ್ಮದು'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ನಾಯಕರಿಗೆ ತಾಕೀತು ಮಾಡಿದರು.

ಕಲಬುರಗಿ ನಗರದ ಕೆಸಿಟಿ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಬೃಹತ್ ಉದ್ಯೋಗ ಮೇಳಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇತರರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಉದ್ಯೋಗ ಮೇಳದಲ್ಲಿ 300ಕ್ಕೂ ಅಧಿಕ ಕಂಪನಿಗಳು ಭಾಗಿಯಾಗಿದ್ದು, 26 ಸಾವಿರ ಅಭ್ಯರ್ಥಿಗಳ ನೋಂದಣಿ ಆಗಿತ್ತು. ಈ ವೇಳೆ 10 ಮಂದಿಗೆ ಸಾಂಕೇತಿಕ ನೇಮಕಾತಿ ಪತ್ರ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷರು, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ''ನಿಮಗಂತೂ ಒಳ್ಳೆಯ ಕೆಲಸ ಮಾಡಲು ಬರಲ್ಲ. ಮಾಡುವವರಿಗಾದರೂ ಬಿಡ್ರಪ್ಪ'' ಎಂದು ಕಿಡಿಕಾರಿದರು. ''ಏಪ್ರಿಲ್​ 14ರಂದು ಹರಿಯಾಣದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತ, ಕಾಂಗ್ರೆಸ್​ ಬಾಬಾ ಸಾಹೇಬರಿಗೆ ಅಪಮಾನ ಮಾಡಿದೆ, ಕಾಂಗ್ರೆಸ್​​ ಯಾವಾಗಲೂ ಅವರಿಗೆ ಅಪಮಾನ ಮಾಡುತ್ತಲೇ ಇದೆ ಎಂದು ಹೇಳಿದ್ದಾರೆ. ಆದರೆ ನೀವು ಅವರ ಹೆಸರನ್ನೂ ತೆಗೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಆದರೆ ನಾವು ಸಂವಿಧಾನ ರಚನೆಗೆ ಅಂಬೇಡ್ಕರ್​ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಆ ಸಂವಿಧಾನವನ್ನು ತೆಗೆದುಹಾಕುವ ಕೆಲಸವನ್ನು ನೀವು ಮಾಡುತ್ತಿರುವಿರಿ'' ಎಂದು ಖರ್ಗೆ ವಾಗ್ದಾಳಿ ನಡೆಸಿದರು.

''ಇ.ಡಿ, ಐಟಿ, ಸಿಬಿಐನಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಇದಕ್ಕೆಲ್ಲ ಹೆದರುವುದಿಲ್ಲ. ಅವರ ಕುಟುಂಬದಲ್ಲಿ ಇಬ್ಬರು ನಾಯಕರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ಧಾರೆ. ಆದರೂ ಇಂದು ಅವರು ಜನರ ಜೊತೆಗಿದ್ದಾರೆ. ನೀವೇನು ಮಾಡಿದ್ದೀರಿ? ಕಾಂಗ್ರೆಸ್​ ಸರ್ಕಾರಗಳನ್ನು ಕೆಡವಿ, ಅಧಿಕಾರ ಪಡೆಯುವ ಪ್ರಯತ್ನ ಮಾಡುತ್ತಿದ್ಧೀರಿ. ಇದಕ್ಕೆಲ್ಲ ಕಾಂಗ್ರೆಸ್​ ಬಗ್ಗುವುದಿಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ, ದೇಶ ಕಟ್ಟುತ್ತೇವೆ. ನಿಮ್ಮ ಬಿಜೆಪಿ ಸರ್ಕಾರವನ್ನು ಒದ್ದು ಓಡಿಸುತ್ತೇವೆ'' ಎಂದು ಖರ್ಗೆ ಗುಡುಗಿದರು.

 

Category
ಕರಾವಳಿ ತರಂಗಿಣಿ