ಬೆಂಗಳೂರು: "ಜಾತಿ ಸಮೀಕ್ಷೆ ವರದಿ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಒಕ್ಕಲಿಗ ಶಾಸಕರ ಸಭೆ ನಡೆಸಿದ್ದು, ಸಭೆಯ ತೀರ್ಮಾನವನ್ನು ಗುರುವಾರ ನಡೆಯುವ ವಿಶೇಷ ಸಭೆಯಲ್ಲಿ ಹೇಳುತ್ತೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಾತಿಗಣತಿ ವರದಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಮಾರ ಪಾರ್ಕ್ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಒಕ್ಕಲಿಗ ಸಚಿವರು, ಶಾಸಕರು, ರಾಜ್ಯಸಭೆ ಸದಸ್ಯರು ಹಾಗೂ ಮುಖಂಡರ ಜತೆ ಸಮಾಲೋಚನೆ ನಡೆಸಿದರು.
ಆಯೋಗದ ಮಾಜಿ ಅಧ್ಯಕ್ಷ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಎಂ.ಸಿ.ಸುಧಾಕರ್, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಪ್ರೊ.ರಾಜೀವ್ ಗೌಡ, ಮಾಜಿ ಸಚಿವ, ಶಾಸಕರಾದ ಟಿ.ಬಿ.ಜಯಚಂದ್ರ, ಬಾಲಕೃಷ್ಣ, ಶಿವಲಿಂಗೇಗೌಡ, ಶರತ್ ಬಚ್ಚೆಗೌಡ, ಸಿ.ಪಿ ಯೋಗೇಶ್ವರ್, ಪ್ರಿಯಾ ಕೃಷ್ಣ, ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿ ಗೌಡ, ಎಸ್.ರವಿ, ದಿನೇಶ್ ಗೂಳಿಗೌಡ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಜಾತಿ ಗಣತಿ ವರದಿ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಏ.17 ರಂದು ವಿಶೇಷ ಸಂಪುಟ ಸಭೆ ಇದೆ. ಶಾಸಕರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಈ ಹಿಂದೆ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಆಗಬೇಕು ಅಂತ ನಾವೇ ಒಪ್ಪಿ ಸಮೀಕ್ಷೆ ಮಾಡಿಸಿದ್ದೇವೆ. ಕೋಟ್ಯಂತರ ರೂ. ಖರ್ಚು ಮಾಡಿ ಸರ್ವೇ ಮಾಡಲಾಗಿದೆ. ವಿಸ್ತೃತ ವರದಿ ಬೇಕು ಎಂದು ಶಾಸಕರು ಕೇಳಿದ್ದಾರೆ. ಕೆಲ ಮಾಧ್ಯಮಗಳಲ್ಲಿ ವಾಸ್ತವಾಂಶ ಬಿಟ್ಟು ತಪ್ಪಾಗಿ ವರದಿಯಾಗಿದೆ. ಮುಸ್ಲಿಮರು ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದಾರೆ ಎಂದು ವರದಿಯಾಗಿದೆ. ಅದು ಸುಳ್ಳು" ಎಂದು ಸ್ಪಷ್ಟಪಡಿಸಿದರು.
"ವಾಸ್ತವಾಂಶ ತಿಳಿಸುವ ಕೆಲಸ ಮಾಡುತ್ತೇವೆ. ಸಭೆಯಲ್ಲಿನ ತೀರ್ಮಾನವನ್ನು ಒಟ್ಟಾಗಿ ಸಂಪುಟ ಸಭೆಯಲ್ಲಿ ಹೇಳುತ್ತೇವೆ. ಎಲ್ಲಾ ಆಫ್ ದಿ ರೆಕಾರ್ಡ್ಗೆ ನಾವು ತೆರೆ ಎಳೆಯುತ್ತೇವೆ. ಎಲ್ಲಾ ಸಮಾಜಕ್ಕೂ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಸಮೀಕ್ಷೆಯನ್ನು ಸರಿಯಾಗಿ ಮಾಡಲಾಗಿದೆ. ಆದರೆ ವಿಪಕ್ಷಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಮುಂಚೆ ಮಾಹಿತಿ ಇದ್ದಿಲ್ಲ. ಹೀಗಾಗಿ ಈಗ ಮಾಹಿತಿ ಸಿಕ್ಕಿದೆ. ಅದನ್ನು ಶಾಸಕರಿಗೆ ಹಂಚಲಿದ್ದೇವೆ. ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕೆಲವರು ರಾಜಕಾರಣ ಮಾಡುವವರು ಮಾಡೇ ಮಾಡುತ್ತಾರೆ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು.