ಬೆಂಗಳೂರು : ಇಂಧನ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದೆ. ಹೆದ್ದಾರಿಗಳ ಪಕ್ಕ, ಮಾರುಕಟ್ಟೆ, ಯಶವಂತಪುರದ ಟ್ರಕ್ ಟರ್ಮಿನಲ್ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿದ್ದು, ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ. ಮಾರುಕಟ್ಟೆ ಮತ್ತಿತರ ಸ್ಥಳಗಳಿಗೆ ಅಗತ್ಯವಸ್ತುಗಳು, ಎಲೆಕ್ಟ್ರಾನಿಕ್ಸ್, ಗೂಡ್ಸ್ ಸಾಗಾಟ ಮಾಡುವ ಸುಮಾರು 6 ಲಕ್ಷ ಲಾರಿಗಳು ರಾಜ್ಯಾದ್ಯಂತ ಸಂಚಾರ ಸ್ಥಗಿತಗೊಳಿಸಿವೆ.
ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಆದೇಶವನ್ನ ಹಿಂಪಡೆಯಬೇಕು. ಎಫ್ಸಿ (ಫಿಟ್ನೆಸ್ ಸರ್ಟಿಫಿಕೇಟ್) ಶುಲ್ಕ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು. ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ಗಳಲ್ಲಿನ ಹಣ ವಸೂಲಿ ತಡೆಯಬೇಕು.vಗಡಿಗಳಲ್ಲಿ ಆರ್ಟಿಒ ಚೆಕ್ಪೋಸ್ಟ್ಗಳನ್ನು ತೆರವುಗೊಳಿಸಬೇಕು. ಗೂಡ್ಸ್ ವಾಹನಗಳಿಗೆ ಬೆಂಗಳೂರು ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಆದೇಶ ಹಿಂಪಡೆಯಬೇಕು. ಲಾರಿ ಚಾಲಕರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಬೇಕು ಸೇರಿದಂತೆ ಇತರ ಬೇಡಿಕೆಗಳಿವೆ.
ಇರುವ ಸೇವೆಗಳು :
ಏರ್‌ಪೋರ್ಟ್ ಟ್ಯಾಕ್ಸಿ, ಫೈರ್ ಸರ್ವಿಸ್ ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆಯಿಲ್ಲ. ಹಾಲು, ಔಷಧ, ತರಕಾರಿ, ಹಣ್ಣಿನ ಸಾಗಾಟ ಇರಲಿದೆ.vಅಕ್ಕಿ ಸಾಗಾಟ 50-50 ಎನ್ನಲಾಗಿದೆ. ಮೆಡಿಕಲ್ ಶಾಪ್, ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆಗಳಲ್ಲಿ ವ್ಯತ್ಯಯವಿಲ್ಲ.
ವ್ಯತ್ಯಯವಾಗುವ ಸೇವೆಗಳು :ಡೊಮೆಸ್ಟಿಕ್ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ. ಧವಸ ಧಾನ್ಯ, ಸರಕು ಸಾಗಾಟದ ವಾಹನಗಳ ಸಂಚಾರದಲ್ಲಿ ವ್ಯತ್ಯಯ. ಅರ್ಥ್ ಮೂವಿಂಗ್, ಬೋರ್‌ವೆಲ್ ವಾಹನಗಳ ಲಭ್ಯತೆಯಲ್ಲಿ ವ್ಯತ್ಯಯ.vಪೆಟ್ರೋಲಿಯಂ ಮತ್ತಿತರ ಇಂಧನ ಉತ್ಪನ್ನಗಳ ಸಾಗಾಟದಲ್ಲಿ ವ್ಯತ್ಯಯ.
ಉಳಿದಂತೆ ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರಿಂದ ಕೇವಲ ನೈತಿಕ ಬೆಂಬಲ ವ್ಯಕ್ತವಾಗಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಎಂದಿನಂತೆ ಟ್ಯಾಕ್ಸಿಗಳು ಸಂಚರಿಸುತ್ತಿವೆ. ಉಳಿದಂತೆ ನಗರದಲ್ಲಿ ಒಲಾ, ಊಬರ್, ರ್‍ಯಾಪಿಡೋ ಟ್ಯಾಕ್ಸಿಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿಲ್ಲ.