ಬೆಂಗಳೂರು: ರಾಜ್ಯದಲ್ಲಿ ಅಧಿಕವಾಗುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪ್ರತ್ಯೇಕ ಸೈಬರ್ ಅಪರಾಧ ಕಮಾಂಡ್ ಘಟಕ ಸ್ಥಾಪಿಸಲಾಗಿದ್ದು, ಡಿಜಿಪಿ ಸೈಬರ್ ಕಮಾಂಡ್ ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಿದೆ.
ತಂತ್ರಜ್ಞಾನದ ಅತಿಯಾದ ಬಳಕೆ ಹಾಗೂ ಅವಲಂಬನೆಯಿಂದ ಅತಿಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಹಳೆಯ ವೃತ್ತಿಪರ ಅಪರಾಧಗಳಾದ ಡಕಾಯಿತಿ, ದರೋಡೆ ಹಾಗೂ ಇತರೆ ಭೌತಿಕ ಕಳ್ಳತನಗಳನ್ನು ಹಿಂದಿಕ್ಕಿ ಅತಿಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ವರದಿ ಆಗುತ್ತಿವೆ. ಮಹಾನಗರಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಶೇ.20ರಷ್ಟು ಸೈಬರ್ ಅಪರಾಧಗಳಾಗಿದ್ದು, ರಾಜ್ಯವೂ ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ.
ಹಾಗೆಯೇ, ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೆಯಾಗಿ 52 ಸಾವಿರ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಸೈಬರ್ ಅಪರಾಧ ತಡೆಗಟ್ಟಲು ರಾಜ್ಯದಲ್ಲಿ ಪ್ರತ್ಯೇಕ ಸೈಬರ್ ಅಪರಾಧ ತಡೆ ಘಟಕ ಸ್ಥಾಪಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಕಳೆದ ವರ್ಷ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಮ್ಮತಿಸಿರುವ ಸರ್ಕಾರ ರಾಜ್ಯದಲ್ಲಿ ಪ್ರತ್ಯೇಕ ಸೈಬರ್ ಕಮಾಂಡ್ ಘಟಕ ಸ್ಥಾಪಿಸಿದೆ.
ಹೊಸ ಘಟಕಕ್ಕೆ 75 ಕೋಟಿ ರೂ. ಅನುದಾನ ನೀಡುವಂತೆ ಕೋರಲಾಗಿತ್ತು. ಆದರೆ, ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಪರಿಣಾಮಕಾರಿಯಾಗಿ ಸೈಬರ್ ಅಪರಾಧ ತಡೆಗಟ್ಟುವ ಕೆಲಸ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ 5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಸಿಇಎನ್ ಠಾಣೆಗಳನ್ನು ಸೈಬರ್ ಅಪರಾಧ ಠಾಣೆಗಳೆಂದು ಮರು ನಾಮಕರಣ ಮಾಡಲಾಗಿದೆ. ಅಲ್ಲದೆ, ಸಿಐಡಿ ಸೈಬರ್ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಠಾಣೆಗಳು ಸೇರಿ ಒಟ್ಟು 45 ಠಾಣೆಗಳನ್ನು ಸೈಬರ್ ಕಮಾಂಡ್ ಘಟಕದ ವ್ಯಾಪ್ತಿಗೆ ಬರಲಿದೆ.
ಈ ಠಾಣೆಗಳು ಅಬಕಾರಿ ಕಾಯ್ದೆ ಲಾಟರಿ ನಿಷೇಧ ಕಾಯ್ದೆ, ನಿಯಮಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ(ಯುಎಪಿಎ), ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ, ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಸೇರಿ ಇತರೆ ಕಾಯ್ದೆಗಳ ತನಿಖೆಯನ್ನು ಈ ಘಟಕ ತನಿಖೆ ನಡೆಸಬಹುದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.