ಬೆಂಗಳೂರು: ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಎಸಿಜೆಂಎಂ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿ ದಂಡ ವಿಧಿಸಿದೆ. ಮತ್ತೊಂದೆಡೆ, ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆ ಮಾಜಿ ಸಚಿವರಾಗಿದ್ದ ನಾಗೇಂದ್ರ, ಅನಿಲ್ ರಾಜಶೇಖರ್ ಮತ್ತು ಚುಂಡೂರು ಭಾಸ್ಕರ್ ಈ ಮೂವರು ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು 42ನೇ ಎಸಿಜೆಂಎಂ ನ್ಯಾಯಾಧೀಶರಾದ ಕೆ.ಎನ್.ಶಿವಕುಮಾರ್ ತೀರ್ಪು ನೀಡಿದ್ದಾರೆ. ಈ ಸಂಬಂಧ 1.23 ಕೋಟಿ ರೂ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟದಿದ್ದರೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ.
ವಿಎಸ್ಎಲ್ ಸ್ಟೀಲ್ ಕಂಪೆನಿ ಹಾಗೂ ನಾಗೇಂದ್ರ, ಅನಿಲ್ ಹಾಗೂ ಭಾಸ್ಕರ್ ಪಾಲುದಾರಿಕೆಯ ಬಿ.ಸಿ.ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ರಿಸೋರ್ಸ್ ಕಂಪನಿ ನಡುವೆ 2013ರಿಂದ ವಿವಾದ ಭುಗಿಲೆದ್ದಿತ್ತು. ಆಗ ದೂರುದಾರ ಕಂಪೆನಿ ಪರವಾಗಿ ನ್ಯಾಯಾಲಯ ತೀರ್ಪು ಬಂದಿತ್ತು. ಇದರಂತೆ 2.53 ಕೋಟಿ ರೂಪಾಯಿ ಪಾವತಿಸುವಂತೆ ತಾಕೀತು ಮಾಡಿತ್ತು. ಈ ಸಂಬಂಧ ನಾಗೇಂದ್ರ ಪಾಲುದಾರಿಯ ಕಂಪೆನಿಯು 2022ರಲ್ಲಿ ನೀಡಿದ್ದ 1 ಕೋಟಿ ರೂಪಾಯಿ ಚೆಕ್ ಬೌನ್ಸ್ ಆಗಿತ್ತು. ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳು ಆರೋಪಿತರ ವಿರುದ್ಧ ಸಾಬೀತಾಗಿದ್ದರಿಂದ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ 94.73 ಕೋಟಿ ರೂ.ಅವ್ಯವಹಾರ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ (E.D.) ಅಧಿಕಾರಿಗಳಿಂದ ಕಳೆದ ವರ್ಷ ಜುಲೈ 12ರಂದು ನಾಗೇಂದ್ರ ಅವರನ್ನ ಬಂಧಿಸಿದ್ದರು. ಜಾಮೀನಿನ ಮೇರೆಗೆ ಹೊರಗಿರುವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕಳೆದ ತಿಂಗಳು ರಾಜ್ಯಪಾಲ ಗೆಹ್ಲೋತ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಪರಿಶೀಲನೆ ನಡೆಸಿರುವ ರಾಜ್ಯಪಾಲರು ನ್ಯಾಯಾಲಯದ ವಿಚಾರಣೆ ಅನುಮತಿ ನೀಡಿದ್ದಾರೆ.