ಬೆಂಗಳೂರು: ವಿಧಾನ ಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ಶುಲ್ಕ ನಿಗದಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರವಾಸೋದ್ಯಮ ಹೆಸರಿನಲ್ಲಿ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಲು ತೀರ್ಮಾನಿಸಲಾಗಿದೆ.
ವಿಧಾನ ಸೌಧ ಬೆಂಗಳೂರು ನಗರದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಭೇಟಿ ನೀಡುವ ದೇಶಿಯ, ವಿದೇಶಿ ಪ್ರವಾಸಿಗರು ಭವ್ಯ ಸೌಧಕ್ಕೆ ಭೇಟಿ ನೀಡಲು ಉತ್ಸುಕತೆ ತೋರುತ್ತಿದ್ದಾರೆ. ಪ್ರವಾಸಿಗರು ಕಟ್ಟಡದ ಹೊರ ಭಾಗದಲ್ಲಿ ನಿಂತು ಛಾಯಾಚಿತ್ರಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.
ಹಾಗಾಗಿ, ಪಾರಂಪರೆ, ಇತಿಹಾಸ ಹಾಗೂ ಮಹತ್ವ ತಿಳಿಸುವ ಮೂಲಕ ಕಟ್ಟಡದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ದೆಹಲಿಯ ರಾಷ್ಟ್ರಪತಿ ಭವನ, ಪಾರ್ಲಿಮೆಂಟ್ ಕಟ್ಟಡಗಳಿಗೆ ಏರ್ಪಡಿಸಿರುವಂತೆ ವಿಧಾನಸೌಧಕ್ಕೂ ಸಹ 'Guided Tour' ಏರ್ಪಡಿಸಿದಲ್ಲಿ ಪ್ರವಾಸಿಗರ ಗಮನ ಸೆಳೆಯಬಹುದಾಗಿದೆ. ಈ ಸಂಬಂಧ 'Guided Tour' ವ್ಯವಸ್ಥೆ ಕಲ್ಪಿಸಲು ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪಿಸಿದೆ.
ವಿಧಾನ ಸೌಧಕ್ಕೆ ಪ್ರಸ್ತುತ ಶಾಶ್ವತ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಕಟ್ಟಡದ ಸೌಂದರ್ಯ ಹೆಚ್ಚುವುದರ ಮೂಲಕ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸೆಳೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ, ವಿಧಾನ ಸೌಧ ಕಟ್ಟಡ ವೀಕ್ಷಿಸಲು ಅವಕಾಶ ನೀಡಿ 'Guided Tour' ಮಾಡಿದಲ್ಲಿ ದೇಶೀಯ ಪ್ರವಾಸಿಗರನ್ನೇ ಅಲ್ಲದೆ, ವಿದೇಶಿ ಪ್ರವಾಸಿಗರ ಗಮನ ಸೆಳೆದು, ವಿಧಾನಸೌಧವನ್ನು ಇನ್ನೂ ಆಕರ್ಷಣೀಯ ಕೇಂದ್ರವನ್ನಾಗಿಸಬಹುದು ಎಂದು ಪ್ರಸ್ತಾಪಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಿಧಾನಸೌಧಕ್ಕೆ 'Guided Tour' ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಾರಿಗೆ ತರಲು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗೊಳಪಟ್ಟು ಮಂಜೂರಾತಿ ನೀಡಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.
ಸಾರ್ವತ್ರಿಕ ರಜಾ ದಿನಗಳಂದು ಮಾತ್ರ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ Guided Tour ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರವಾಸಿಗರನ್ನು ತಲಾ 30 ರಂತೆ ತಂಡಗಳನ್ನಾಗಿ ವಿಭಜಿಸಿ, ವೀಕ್ಷಣೆಗೆ ಅವಕಾಶ ಕಲ್ಪಿಸುವುದು ಹಾಗೂ ಈ ಪ್ರತಿ ತಂಡಗಳ ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಅಧಿಕಾರಿಗಳನ್ನು (Tourist Officer) ಕಡ್ಡಾಯವಾಗಿ ನೇಮಿಸುವುದು ಹಾಗೂ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಇವರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸುವುದು. ಪ್ರತಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹಾಗೂ ವಿವರಗಳನ್ನು ಸಿಆಸುಇ(ಕಾರ್ಯಕಾರಿ) ಹಾಗೂ ವಿಧಾನಸೌಧದ ಭದ್ರತಾ ವಿಭಾಗಕ್ಕೆ ಆಯಾದಿನವೇ ಸಲ್ಲಿಸುವುದು. Guided Tourಗೆ ಅನುವಾಗುವಂತೆ ಪ್ರವಾಸಿಗರು Online ಮುಖಾಂತರ Ticket ಪಡೆಯಲು ಪ್ರವಾಸೋದ್ಯಮ ಇಲಾಖೆಯಿಂದ ಒಂದು ತಂತ್ರಾಂಶ ಅಭಿವೃದ್ಧಿಪಡಿಸಬೇಕು.
ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ದರವು ಜನಸ್ನೇಹಿಯಾಗಿರಬೇಕು ಹಾಗೂ ವಸೂಲಿ ಮಾಡುವ ಪ್ರವೇಶ ಶುಲ್ಕದಲ್ಲಿ ನಿರ್ದಿಷ್ಟ ಶುಲ್ಕವನ್ನು ಪ್ರವಾಸೋದ್ಯಮ ಇಲಾಖೆಯು ಜಮಾ ಮಾಡಬೇಕು.
ಉಪ ಪೊಲೀಸ್ ಆಯುಕ್ತರು, ವಿಧಾನಸೌಧ ಭದ್ರತೆ ಇವರು ಭದ್ರತೆಗೆ ಸಂಬಂಧಿಸಿದಂತೆ ನೀಡುವ ಸೂಚನೆಗಳನ್ನು ಪಾಲಿಸಲು ಬದ್ಧರಾಗಿರಬೇಕು. ಪ್ರವಾಸಿಗರ ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿ, ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ವಿಧಾನ ಸೌಧ ಕಟ್ಟಡ/ಉದ್ಯಾನವನಗಳು/ಪ್ರತಿಮೆಗಳಿಗೆ ಯಾವುದೇ ದಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಈ ಕುರಿತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಕ್ರಮವಹಿಸಬೇಕು.
ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಪರಿವೀಕ್ಷಣೆಯ ಕುರಿತು ರೂಟ್ ಮ್ಯಾಪ್ (Root Map/Layout Map) ಅನ್ನು ಲೋಕೋಪಯೋಗಿ ಇಲಾಖೆ/ವಿಧಾನಸೌಧ ಭದ್ರತಾ ವಿಭಾಗದೊಂದಿಗೆ ಸಮಾಲೋಚಿಸಿ ತಯಾರಿಸಿ ಕಡ್ಡಾಯವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅನುಮೋದನೆ ಪಡೆಯಬೇಕು. ಪರಿವೀಕ್ಷಣೆಯ ಸಂದರ್ಭದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸುಸಜ್ಜಿತ ವೈದ್ಯಕೀಯ ತಂಡದೊಂದಿಗೆ ಆಂಬ್ಯುಲೆನ್ಸ್ ಸೌಲಭ್ಯವನ್ನು ಕಲ್ಪಿಸಲು ಆರೋಗ್ಯ ಇಲಾಖೆಯು ಅಗತ್ಯ ಕ್ರಮವಹಿಸಬೇಕು.
ಅಗ್ನಿ ಅವಘಡ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗ್ನಿ ಶಾಮಕ ಇಲಾಖೆಯವರು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸಿದ್ಧರಿರಬೇಕು. ಪ್ರವಾಸಿಗರು ಪಾಲಿಸಬೇಕಾದ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಅಗತ್ಯ ಕ್ರಮವಹಿಸಬೇಕು. ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ವಿಧಾನಸೌಧದ ಅವರಣದ ಸ್ವಚ್ಛತೆಯನ್ನು ಕಾಪಾಡಲು ಬದ್ಧರಾಗಿರಬೇಕು.
ವಿಧಾನ ಸೌಧ ಕಟ್ಟಡದ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಡ್ರೋನ್ ಕ್ಯಾಮರಾವನ್ನು ಬಳಸುವುದನ್ನು ನಿಷೇಧಿಸಿದೆ. ಪರಿವೀಕ್ಷಣೆಯ ಸಂದರ್ಭದಲ್ಲಿ ಪ್ರವಾಸಿಗರು ಕುಡಿಯುವ ನೀರನ್ನು ಹೊರತುಪಡಿಸಿ, ಇನ್ನುಳಿದ ಯಾವುದೆ ಆಹಾರ/ತಿಂಡಿ/ತಿನಿಸುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.ವಿಧಾನ ಸೌಧದ ಆವರಣದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.