image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ : ಎಂದಿನಂತೆ ಬಾಲಕಿಯರ ಮೇಲುಗೈ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ : ಎಂದಿನಂತೆ ಬಾಲಕಿಯರ ಮೇಲುಗೈ

ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಪರೀಕ್ಷೆ ಬರೆದಿದ್ದ 6,37,805 ಲಕ್ಷ ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಮೂಲಕ ಶೇ.73.45ರಷ್ಟು ಫಲಿತಾಂಶ ಬಂದಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ.8ರಷ್ಟು ಕುಸಿತವಾಗಿದ್ದು,ಕಲಾ ವಿಭಾಗದಲ್ಲಿ ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಲ್.ಆರ್.ಸಂಜನಾಬಾಯಿ ಅವರಿಗೆ ಒಟ್ಟು 600ರಲ್ಲಿ 597 ಅಂಕ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೊಡಿಂಬೈಲ್​ನ ಕೆನೆರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಾಶ್ರೀ ಎಸ್. ಅವರು 599 ಅಂಕ ಗಳಿಸುವ ಮೂಲಕ ಟಾಪರ್​ ಆಗಿದ್ದರೆ, ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಕೋಡಿಬೈಲ್​ನ ಎಕ್ಸ್​ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಅವರು 599 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ.

ಹಿಂದಿನ ವರ್ಷಗಳಂತೆ ಈ ಬಾರಿಯೂ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು,  ಪರೀಕ್ಷೆ ಬರೆದಿದ್ದ 3,45,694 ವಿದ್ಯಾರ್ಥಿಗಳ ಪೈಕಿ 2,69,212 ಬಾಲಕಿಯರು ತೇರ್ಗಡೆಯಾಗಿದ್ದಾರೆ. 2,92,211 ಬಾಲಕರ ಪೈಕಿ 1,99,227 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಅದೇ ರೀತಿ, ನಗರ ಪ್ರದೇಶಗಳಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಶೇ.74.55 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ ಶೇ.69.33ರಷ್ಟು ಮಂದಿ ಪಾಸಾಗಿದ್ದಾರೆ.

ಉಡುಪಿ (ಶೇ.93.90), ದಕ್ಷಿಣ ಕನ್ನಡ (93.57) ಹಾಗೂ ಬೆಂಗಳೂರು ದಕ್ಷಿಣ (85.36) ಕ್ರಮವಾಗಿ ಅತಿ ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಗಳಾಗಿವೆ.ಯಾದಗಿರಿ (ಶೇ.48.45) ಕಲಬುರಗಿ (55.70) ಹಾಗೂ ರಾಯಚೂರು (58.75) ಜಿಲ್ಲೆಗಳು ಅತಿ ಕಡಿಮೆ ಫಲಿತಾಂಶ ಬಂದ ಜಿಲ್ಲೆಗಳಾಗಿವೆ.

ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳ ಪೈಕಿ 134 ಕಾಲೇಜುಗಳಿಂದ ಶೇ.100ರಷ್ಟು ಫಲಿತಾಂಶ ಬಂದಿವೆ. ಅದೇ ರೀತಿ, 123 ಕಾಲೇಜುಗಳಿಂದ ಶೂನ್ಯ ರಿಸರ್ಲ್ಟ್ ನೀಡಿವೆ.

ಹೊಸದಾಗಿ ಪರೀಕ್ಷೆ ಹಾಜರಾಗಿದ್ದ 6.37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಪಾಸಾಗಿದ್ಧಾರೆ.ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ಶೇ.56.37 ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳ ಪೈಕಿ ಶೇ.87.75ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಹಾಗೂ ಮರುಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳು ಆನ್​ಲೈನ್ ಹಾಗೂ ಆಫ್​ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಏ.8ರಿಂದ 14ರವರೆಗೆ ಅರ್ಜಿ ಸಲ್ಲಿಬಹುದಾಗಿದೆ. ಏ.12ರಿಂದ 16ರವರೆಗೆ ಉತ್ತರ ಪತ್ರಿಕೆಯ ಸ್ಕ್ಯ್ರಾನ್ ಪ್ರತಿ ಡೌನ್​ಲೋಡ್ ಮಾಡಿಕೊಳ್ಳಬಹುದು.

ಮೌಲ್ಯಮಾಪನ ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ರ್ಯಾನ್ ಪ್ರತಿ ಪಡೆದುಕೊಂಡವರಿಗೆ ಮಾತ್ರ) ಏ.12ರಿಂದ 17ರವರೆಗೆ ಅರ್ಜಿ ಸಲ್ಲಿಸಬಹುದು. ಪ್ರತಿ ವಿಷಯದ ಸ್ಕ್ಯಾನ್ ಪ್ರತಿಗಾಗಿ 530 ರೂ. ಹಾಗೂ ಮರುಮೌಲ್ಯಮಾಪನ ಶುಲ್ಕ 1,670 ರೂ. ಪಾವತಿಸಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ