ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ(bengaluru city) ಜೆಡಿಎಸ್ ಪಕ್ಷ ಬಲಗೊಳಿಸುವುದು ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಯಾರಿ, ರಾಜ್ಯ ಕಾಂಗ್ರೆಸ್ ಸರ್ಕಾರದ(state Congress government) ವಿರುದ್ಧ ನಿರಂತರ ಜನಾಂದೋಲನ ರೂಪಿಸುವ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖಂಡರ ಜೊತೆ ಮಹತ್ವದ ಮಾತುಕತೆ ನಡೆಸಿದರು.
ನಗರದ ತಮ್ಮ ನಿವಾಸದಲ್ಲಿ ಆಹ್ವಾನಿತ ಮುಖಂಡರ ಜತೆ ಸಭೆ ನಡೆಸಿದ ಸಚಿವರು, ಕ್ರಿಯಾಶೀಲವಲ್ಲದ ಜಿಲ್ಲಾಧ್ಯಕ್ಷರ ಬದಲಾವಣೆ, ಖಾಲಿ ಇರುವ ಜಿಲ್ಲಾಧ್ಯಕ್ಷರ ಸ್ಥಾನಗಳ ಭರ್ತಿ, ಸದಸ್ಯತ್ವ ನೋಂದಣಿಯ ಪ್ರಗತಿ ಬಗ್ಗೆಯೂ ಮುಖಂಡರೊಂದಿಗೆ ಮಹತ್ವದ ಚರ್ಚೆ ಮಾಡಿದರು.
ಅಲ್ಲದೇ, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ರಾಜ್ಯವ್ಯಾಪಿ ಹೋರಾಟಗಳನ್ನು ಹಮ್ಮಿಕೊಳ್ಳುವಂತೆ ಕೇಂದ್ರ ಸಚಿವರು ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿದ್ಯುತ್, ನೀರು, ಬಸ್ ಪ್ರಯಾಣ ದರ, ಹಾಲು, ಮೊಸರು, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜನರ ಪರವಾಗಿ ಪಕ್ಷ ಹೋರಾಟಗಳನ್ನು ನಡೆಸಬೇಕು. ಜನರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ಇದನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಹಳೆ ಮೈಸೂರು(old Mysore) ಭಾಗದ ಹದಿನೈದು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಕೈಗೊಳ್ಳುವುದಾಗಿ ಮುಖಂಡರಿಗೆ ಹೆಚ್ಡಿಕೆ (h.d kumarswamy) ತಿಳಿಸಿದರು. ಪ್ರತಿ ಜಿಲ್ಲೆಗೂ ಒಂದೊಂದು ದಿನ ಭೇಟಿ ನೀಡುತ್ತೇನೆ. ಕಾರ್ಯಕರ್ತರು, ಮುಖಂಡರ ಜೊತೆ ಆ ದಿನವನ್ನು ಕಳೆಯುತ್ತೇನೆ. ಅವರ ಅಹವಾಲು, ಸಮಸ್ಯೆ ಖುದ್ದು ಆಲಿಸುತ್ತೇನೆ. ಅವರ ಸಮಸ್ಯೆಗಳನ್ನು ಸರಿ ಮಾಡುತ್ತೇನೆ. ಶೀಘ್ರವೇ ಪ್ರವಾಸದ ದಿನಾಂಕ ನಿಗದಿ ಮಾಡುತ್ತೇನೆ ಎಂದು ಹೇಳಿದರು.
ನರೇಂದ್ರ ಮೋದಿ(narendra modi) ಅವರ ಸಂಪುಟದಲ್ಲಿ ಸಿಕ್ಕಿರುವ ಅವಕಾಶ ಬಳಸಿಕೊಂಡು ಪ್ರಧಾನಿಗಳ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಕೈಲಾದ ಮಟ್ಟಿಗೆ ಒಳ್ಳೆಯ ಕೆಲಸ ಮಾಡಲು ಶ್ರಮ ಹಾಕುತ್ತಿದ್ದೇನೆ. ಕೇಂದ್ರದಲ್ಲಿ ಕೆಲಸ ಮಾಡಿಕೊಂಡೇ ಪಕ್ಷ ಸಂಘಟನೆಗೆ ಸಮಯ ನಿಗದಿ ಮಾಡುತ್ತೇನೆ. ಪ್ರತಿ ಕಾರ್ಯಕರ್ತ, ಮುಖಂಡನಿಗೂ ಸಿಗುತ್ತೇನೆ ಎಂದು ಮುಖಂಡರಿಗೆ ಸಚಿವರು ಹೇಳಿದರು.
ನಲವತ್ತು ಐವತ್ತು ಸಾವಿರ ಮತ ಪಡೆದಿರುವ ಅಭ್ಯರ್ಥಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಗೆ ಅವರನ್ನು ಸಜ್ಜು ಮಾಡುತ್ತೇನೆ. ತಳಮಟ್ಟದಿಂದ ಸಂಘಟನೆ ಬಲಗೊಳಿಸಲು ಏನು ಮಾಡಬೇಕೋ ಅದನ್ನೇ ಮಾಡುತ್ತೇನೆ ಎಂದ ಸಚಿವರು, ರಾಜ್ಯದಲ್ಲಿ ಜೆಡಿಎಸ್ ಅನಿವಾರ್ಯವಾಗಿದೆ. ನಾವು ನಮ್ಮ ನಿಲುವು ಜನರ ಪರ. ಜನ ಸಾಮಾನ್ಯರ ಪರ ನಿಲ್ಲಬೇಕು. ಕೂಡಲೇ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಿ. ಎಲ್ಲೆಲ್ಲಿ ಗೆಲ್ಲುತ್ತೇವೆಯೋ ಆ ಕ್ಷೇತ್ರಗಳನ್ನು ಪಟ್ಟಿ ಮಾಡಿ. ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಬಗ್ಗೆ ಹೆಚ್ಚು ಮುತುವರ್ಜಿ ಕೊಟ್ಟು ಕೆಲಸ ಮಾಡಿ. ಹಗಲು ರಾತ್ರಿ ನಾನು ಕೆಲಸ ಮಾಡಲು ಸಿದ್ಧ. ನನ್ನ ಹಾಗೆಯೇ ನೀವು ಕೆಲಸ ಮಾಡಲೇಬೇಕು ಎಂದು ನೇರ ಮಾತುಗಳಲ್ಲಿ ಕುಮಾರಸ್ವಾಮಿ ಅವರು ಹೇಳಿದರು.