image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯಿಂದ ಹೋಂ ಗಾರ್ಡ್ಸ್ ನೇಮಕಾತಿ

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯಿಂದ ಹೋಂ ಗಾರ್ಡ್ಸ್ ನೇಮಕಾತಿ

ಹುಬ್ಬಳ್ಳಿ: ರೈಲ್ವೆ ಪ್ರಯಾಣಿಕರ ಸುರಕ್ಷತೆ ‌ಹಾಗೂ ಭದ್ರತೆಗಾಗಿ ಹೋಂ ಗಾರ್ಡ್​ಗಳನ್ನು ನೇಮಿಸಲು ನೈರುತ್ಯ ರೈಲ್ವೆ(south western) ತೀರ್ಮಾನಿಸಿದೆ. ಆರ್​​ಪಿಎಫ್ ಸಿಬ್ಬಂದಿ ಕೊರತೆಯಿಂದ ರೈಲ್ವೆ ಸುರಕ್ಷತಾ ಸಮಸ್ಯೆಗಳನ್ನು ನೀಗಿಸಿಕೊಳ್ಳಲು ರೈಲ್ವೆ ಭದ್ರತಾ ಪಡೆ (rpf)ಯು ರಾಜ್ಯದ ಗೃಹ ರಕ್ಷಕ ದಳ(home guard) ಸೇವೆ ಪಡೆಯಲು ಮುಂದಾಗಿದೆ.

ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಶೇ.30ರಷ್ಟು ಭದ್ರತಾ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ. ಇದರಿಂದ ನೈರುತ್ಯ ರೈಲ್ವೆ ವ್ಯಾಪ್ತಿಯ ವಿಶೇಷ ಹಾಗೂ ಎಕ್ಸ್​​ಪ್ರೆಸ್​​ ರೈಲುಗಳು ಆರ್‌ಪಿಎಫ್ ಸಿಬ್ಬಂದಿ ಇಲ್ಲದೆ ಸಂಚರಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ರೈಲುಗಳ ಸಂಖ್ಯೆಗೆ ಅನುಗುಣವಾಗಿ ಆರ್‌ಪಿಎಫ್ ಸಿಬ್ಬಂದಿ ಹುದ್ದೆಗಳ ಮಂಜೂರಾತಿ ಸಂಖ್ಯೆ ಹೆಚ್ಚಿಸುತ್ತಿಲ್ಲ ಎಂಬ ದೂರುಗಳಿವೆ.

ರೈಲುಗಳಿಗೆ ಅನುಗುಣವಾಗಿ ಹೆಚ್ಚುವರಿ ಲೋಕೋಪೈಲಟ್(locopilot), ಗಾರ್ಡ್ಸ್guards) ನೇಮಕಕ್ಕೆ ಆಸಕ್ತಿ ತೋರುವ ರೈಲ್ವೆ ಸಚಿವಾಲಯ, ಅದಕ್ಕೆ ತಕ್ಕಂತೆ ಸುರಕ್ಷತೆ ಒದಗಿಸುವ ಆರ್‌ಪಿಎಫ್ ಸಿಬ್ಬಂದಿ ನೇಮಕದಲ್ಲಿ ನಿರಾಸಕ್ತಿ ತೋರಿಸುತ್ತಿದೆ ಎಂಬ ಆಕ್ಷೇಪಗಳಿವೆ. ರೈಲುಗಳಲ್ಲಿ ಭದ್ರತೆ ಕೊರತೆಯ ಲಾಭ ಪಡೆಯುವ ಕಳ್ಳರು ಆಗಾಗ್ಗೆ ಕೈಚಳಕ ತೋರಿಸುತ್ತಿರುವುದು ಸಾಮಾನ್ಯವಾಗಿದೆ.

ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಯಲ್ಲಿ ವೈಫಲ್ಯಗಳಾಗುತ್ತಿವೆ. ಮಹಿಳಾ ಪ್ರಯಾಣಿಕರನ್ನು ಛೇಡಿಸುವುದು, ತಡರಾತ್ರಿವರೆಗೆ ಗದ್ದಲ ಮಾಡುವುದು, ಆಸನಕ್ಕಾಗಿ ಜಗಳವಾಡುವುದು, ಮೊಬೈಲ್​​ಗಳಲ್ಲಿ(mobile) ಎತ್ತರದ ದನಿಯಲ್ಲಿ ಹಾಡುಗಳನ್ನು ಕೇಳುವುದು, ಇತರ ಪ್ರಯಾಣಿಕರಿಗೆ ಕೇಳುವಂತೆ ಅಶ್ಲೀಲ ಮಾತುಗಳನ್ನಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದಲ್ಲದೇ ರೈಲ್ವೆ ಸ್ಟೇಶನ್‌ಗಳಲ್ಲಿಯೂ ಸುರಕ್ಷತಾ ಕ್ರಮಗಳ ಮೇಲೆ ಆರ್‌ಪಿಎಫ್​​ನ ವೈಫಲ್ಯ ಇದೆ.

ಈ ಹಿನ್ನೆಲೆಯಲ್ಲಿ ಹೋಂ ಗಾರ್ಡ್ ಸೇವೆ ಪಡೆದು ಅವರಿಗೆ ರೈಲು ನಿಲ್ದಾಣಗಳಲ್ಲಿ ಸುರಕ್ಷತೆ ಜವಾಬ್ದಾರಿ ವಹಿಸಿ, ಅಲ್ಲಿನ ಆರ್‌ಪಿಎಫ್ ಸಿಬ್ಬಂದಿಯನ್ನು ರೈಲುಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಉದ್ದೇಶಿಸಿದೆ.

ಈ‌ ಕುರಿತಂತೆ ‌ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ''ಈಗಿರುವ ಆರ್​​ಪಿಎಫ್ ಸಿಬ್ಬಂದಿ ರೈಲುಗಳು ಹಾಗೂ ರೈಲು ‌ನಿಲ್ದಾಣಗಳ ಸುರಕ್ಷತೆ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡುತ್ತಿದ್ದಾರೆ. ಸದ್ಯ ನೈರುತ್ಯ ವಲಯಕ್ಕೆ 1577 ಆರ್​​ಪಿಎಫ್ ಸಿಬ್ಬಂದಿ ನಿಯೋಜನೆಯಾಗಿದ್ದಾರೆ. ಆದ್ರೆ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವವರು 1100 ಸಿಬ್ಬಂದಿ. ಈಗ 30ರಷ್ಟು ಸಿಬ್ಬಂದಿ ಕೊರತೆ ಇದೆ. ಇದನ್ನು ಸರಿದೂಗಿಸಲು ರೈಲ್ವೆ ಮಂಡಳಿಗೆ ಮನವಿ ಮಾಡಲಾಗಿದೆ. ಶೇ. 30 ಬಾಕಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷಾ ಹಂತ ಹಾಗೂ ನೇಮಕಾತಿ ಮುಗಿಯುವವರೆಗೂ ಹೋಂ ಗಾರ್ಡ್ ಬಳಕೆ ಮಾಡಿಕೊಳ್ಳಲಾಗುತ್ತಿದೆ'' ಎಂದು ಹೇಳಿದರು.

Category
ಕರಾವಳಿ ತರಂಗಿಣಿ