ಬೆಂಗಳೂರು : ಕೇಂದ್ರ ಸರ್ಕಾರ ಸ್ವಾಮ್ಯದ ಪ್ರತಿಷ್ಠಿತ ವಿಮಾನ ತಯಾರಿಕಾ ಕಂಪನಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್(HAL Ltd) ಸಂಸ್ಥೆ ಬರೋಬ್ಬರಿ 30,400 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ಹಣಕಾಸು(financila year) ವರ್ಷಕ್ಕಿಂತಲೂ ಅಲ್ಪ ಪ್ರಮಾಣದ ಹೆಚ್ಚಿನ ಆದಾಯವನ್ನು ಪ್ರಸಕ್ತ 2024-25 ನೇ ಸಾಲಿನ ಹಣಕಾಸು ವರ್ಷದಲ್ಲಿ ಹೆಚ್ಎಎಲ್ ದಾಖಲಿಸಿದೆ.
ಹೆಚ್ಎಎಲ್ ಅತಿಹೆಚ್ಚು ಆದಾಯ ಗಳಿಸಿದ ಬಗ್ಗೆ ಕಂಪನಿಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಡಿ. ಕೆ. ಸುನೀಲ್ ಅವರು ಹೆಚ್ಎಎಲ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ವರಮಾನ (ತಾತ್ಕಾಲಿಕ ಮತ್ತು ಲೆಕ್ಕಪರಿಶೋಧನಾ ರಹಿತ) ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಹೆಚ್ಎಎಲ್ 30,381 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಈ ವರ್ಷ ಲಘು ಯುದ್ಧ ವಿಮಾನ ಎಲ್ಸಿಎ ಮತ್ತು ಎಎಲ್ಹೆಚ್ ವಿಮಾನಗಳ ವಿತರಣೆಯ ಕೊರತೆಯ ನಡುವೆಯೂ 30,400 ಕೋಟಿ ರೂಪಾಯಿಗಳ ಆದಾಯ ಗಳಿಸುವ ಮೂಲಕ ಸಾಧನೆ ಮಾಡಿದೆ ಎಂದು ಹೆಚ್ಎಎಲ್ನ ಅಧ್ಯಕ್ಷರು ಹೇಳಿದ್ದಾರೆ.
ಇಂಜಿನ್ಗಳ ಲಭ್ಯತೆಯ ಕೊರತೆಯಿಂದಾಗಿ ಎಲ್ಸಿಹೆಚ್ (Light Combat Helicopter) ವಿತರಣೆ ಮೇಲೆ ಪರಿಣಾಮ ಉಂಟಾಯಿತು. ಇದರ ಪರಿಣಾಮ ಮತ್ತಷ್ಟು ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಕಳೆದ ಜನವರಿಯಲ್ಲಿ ಸಂಭವಿಸಿದ ಎಎಲ್ಹೆಚ್ (Advance Light Helicopter) ಹೆಲಿಕಾಪ್ಟರ್ ಅಪಘಾತದಿಂದಾಗಿ ಎಎಲ್ಹೆಚ್ನ ವಿತರಣಾ ವೇಳಾಪಟ್ಟಿಯಲ್ಲಿಯೂ ವ್ಯತ್ಯಯ ಉಂಟಾಯಿತು ಎಂದು ಹೆಚ್ಎಎಲ್ನ ಮುಖ್ಯಸ್ಥರು ಟ್ವೀಟ್ನಲ್ಲಿ(tweet) ತಿಳಿಸಿದ್ದಾರೆ.
ಇವುಗಳ ನಡುವೆಯೂ ಇತರ ಉತ್ಪನ್ನಗಳು(products) ಮತ್ತು ಸೇವೆಗಳ (service) ವಿತರಣೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ಕಂಪನಿಯ ಆದಾಯದ ಪ್ರಮಾಣವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಚೇರ್ಮನ್ ಅವರು ಹೆಚ್ಎಎಲ್ನ ಸಾಧನೆ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.