ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ಗಳು ಧರಿಸುತ್ತಿರುವ ಬ್ರಿಟಿಷ್ ಕಾಲದ ಟೋಪಿ ಬದಲಾವಣೆಯ ಕಾಲ ಸನ್ನಿಹಿತವಾಗಿದ್ದು, ಟೋಪಿ ಬದಲಿಸುವಂತೆ ಹಲವು ವರ್ಷಗಳಿಂದಲೂ ಪೊಲೀಸ್ ಸಿಬ್ಬಂದಿ ಬೇಡಿಕೆಯಿಡುತ್ತಲೇ ಬಂದಿದ್ದರಾದರೂ ಇದುವರೆಗೂ ಬೇಡಿಕೆ ಈಡೇರಿಲ್ಲ. ಇದೀಗ ಹಳೆಯ ಮಾದರಿಯ ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್ ಕ್ಯಾಪ್ ನೀಡುವುದರ ಕುರಿತು ಚರ್ಚೆ ನಡೆಸಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೂಚಿಸಿದ್ದು, ಏಪ್ರಿಲ್ 4ರಂದು ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿಯ ಸದಸ್ಯರು ಸಭೆ ಸೇರಲಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ಗಳ ಕ್ಯಾಪ್ ಬದಲಾವಣೆಯ ಕುರಿತ ಚರ್ಚೆ ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಕಾನ್ಸ್ಟೇಬಲ್ಗಳ ಕ್ಯಾಪ್ ಬದಲಾವಣೆಯ ಕುರಿತ ಸಾಧಕ ಭಾದಕಗಳ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಆದರೆ, ಅದಾಗಲೇ ಲಕ್ಷಾಂತರ ಸ್ಲೋಚ್ ಹ್ಯಾಟ್‌ಗಳು ಸಿದ್ಧವಾಗಿದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ಪೀಕ್ ಕ್ಯಾಪ್ ವಿತರಣೆಗೆ ಒಮ್ಮತದ ಅಭಿಪ್ರಾಯ ಮೂಡಿರಲಿಲ್ಲ. ಇದೀಗ ಪೀಕ್ ಕ್ಯಾಪ್ ವಿತರಣೆಯ ಕುರಿತು ಚರ್ಚಿಸಲು ಮತ್ತೊಮ್ಮೆ ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿಯ ಸದಸ್ಯರು ಸಭೆ ಸೇರಲಿದ್ದಾರೆ.
ಹಳೆ ಮಾದರಿಯ ಹ್ಯಾಟ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ ಎನ್ನಲಾಗುತ್ತಿದೆ. ಸ್ಲೋಚ್ ಹ್ಯಾಟ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಪ್ರತಿಭಟನೆ, ರ್‍ಯಾಲಿ, ಅಪರಾಧಿಗಳನ್ನು ಬೆನ್ನತ್ತುವ ಸಂದರ್ಭಗಳಲ್ಲಿ ಸ್ಲೋಚ್ ಹ್ಯಾಟ್ ಧರಿಸಿ ಕರ್ತವ್ಯ ನಿರ್ವಹಿಸುವುದು ಕಿರಿಕಿರಿಯುಂಟು ಮಾಡುತ್ತಿದೆ. ಹ್ಯಾಟ್ ಕೆಳಗೆ ಬಿದ್ದರೆ ಇಲಾಖೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಹಳೆ ಮಾದರಿಯ ಹ್ಯಾಟ್ ಬದಲು ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವಂತಹ ಎಲಾಸ್ಟಿಕ್ ಮಾದರಿಯ ಕ್ಯಾಪ್‌ಗಳನ್ನು ನೀಡಿದರೆ ಉತ್ತಮ ಎನ್ನುವುದು ಪೊಲೀಸ್ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿದೆ.