image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷರಿಗೆ ಇ.ಡಿ ಜಾರಿ ಮಾಡಿದ್ದ ಸಮನ್ಸ್ ಅನ್ನು ಎತ್ತಿ ಹಿಡಿದಿದ ಹೈಕೋರ್ಟ್​

ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷರಿಗೆ ಇ.ಡಿ ಜಾರಿ ಮಾಡಿದ್ದ ಸಮನ್ಸ್ ಅನ್ನು ಎತ್ತಿ ಹಿಡಿದಿದ ಹೈಕೋರ್ಟ್​

ಬೆಂಗಳೂರು: ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್‌ ಪ್ರಶ್ನಿಸಿ, ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯಪೀಠ ವಜಾಗೊಳಿಸಿದೆ.

ಅಲ್ಲದೇ, ಬಾಕಿ ಇರುವ ಶೆಡ್ಯೂಲ್ಡ್‌ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಹೆಸರು ಇಲ್ಲದಿದ್ದರೂ ಸಹ ಅಂತಹವರನ್ನು ಇ.ಡಿ ವಿಚಾರಣೆಗೆ ಹಾಜರಾಗಲು ಸಮನ್ಸ್‌ ಮಾಡಬಹುದು ಎಂದು ಹೈಕೋರ್ಟ್‌ ಹೇಳಿದೆ.

ಇ.ಡಿ ಸಮನ್ಸ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯಪೀಠದ ಆದೇಶದ ವಿರುದ್ಧ ಆರ್‌.ಎಂ.ಮಂಜುನಾಥ್‌ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ.ವಿ.ಕಾಮೇಶ್ವರ್‌ ರಾವ್‌ ಮತ್ತು ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಹಣಕಾಸು ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಾಗಿರುವ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಹೆಸರು ಇಲ್ಲದಿದ್ದರೂ ಸಹ ಅಂತಹವರನ್ನು ವಿಚಾರಣೆಗೆ ಹಾಜರಾಗಲು ಸಮನ್ಸ್‌ ಜಾರಿ ಮಾಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ.

ಇತರ ಆರೋಪಿಗಳ ವಿರುದ್ಧ ಅಕ್ರಮ ಸಂಪತ್ತು ಹೊಂದಿದ್ದಾರೆ ಎಂಬ ಆರೋಪ ಮುಂದುವರೆಸಿದರೂ ಸಹ ತಮ್ಮ ವಿರುದ್ಧದ ಆರೋಪ ಕೈಬಿಡಬೇಕು ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿ, ಏಕಸದಸ್ಯಪೀಠದ ಆದೇಶವನ್ನು ಎತ್ತಿಹಿಡಿದಿದೆ.

ಜೊತೆಗೆ, ಸೆಕ್ಷನ್‌ 50(2)ರ ಪ್ರಕಾರ ತನಿಖೆಯ ವೇಳೆ ಸಾಕ್ಷ್ಯಗಳನ್ನು ಸಂಗ್ರಹ ಮಾಡುವುದು ಅಥವಾ ದಾಖಲೆಗಳನ್ನು ಸಂಗ್ರಹ ಮಾಡುವ ಉದ್ದೇಶದಿಂದ ಅಯಾ ಪ್ರದೇಶದಲ್ಲಿದ್ದ ನ್ಯಾಯಾಲಯ ಆರೋಪಿಯಲ್ಲದವರಿಗೂ ಸಹ ಸಮನ್ಸ್‌ ಜಾರಿಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಏಕಸದಸ್ಯಪೀಠದ ಆದೇಶ ಸರಿಯಾಗಿಯೇ ಇದೆ. ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಹೇಳಿರುವಂತೆ ಸಮನ್ಸ್‌ ಜಾರಿಗೊಳಿಸಿದಾಕ್ಷಣ ಆರ್ಜಿದಾರರ ವಿರುದ್ಧ ಯಾವುದೇ ಆರೋಪ ಮಾಡಿದಂತಲ್ಲ. ಅವರು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಬೇಕು ಅಷ್ಟೇ. ಹಾಗಾಗಿ, ಸಮನ್ಸ್‌ ಜಾರಿ ದೋಷಪೂರಿತ ಎಂದು ಹೇಳಲಾಗದು ಎಂದು ನ್ಯಾಯಪೀಠ ಹೇಳಿದೆ.

Category
ಕರಾವಳಿ ತರಂಗಿಣಿ