ಬೆಂಗಳೂರು : ಕರ್ನಾಟಕದ ಜನತೆಗೆ ಕಾಂಗ್ರೆಸ್ ಸರ್ಕಾರ ಮತ್ತೊಂದು ಬಿಗ್ ಶಾಕ್ ನೀಡಿದೆ. ಬಸ್ ಟಿಕೆಟ್ ದರ, ಮೆಟ್ರೋ ದರ ಏರಿಕೆ ಬೆನ್ನಲ್ಲೇ, ಇದೀಗ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ಮತ್ತೆ 4 ರೂಪಾಯಿ ಏರಿಕೆ ಮಾಡಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದೂ ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಏರಿಕೆ ಮಾಡಿ ಅನುಮೋದನೆ ದೊರಕಿದೆ.
ಈಗಾಗಲೇ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಮತ್ತೆ ನಂದಿನಿ ಹಾಲಿನ ದರ 4 ರೂ ಏರಿಕೆ ಮಾಡಿ ಜಜನರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ನಿರಂತರವಾಗಿ ಬೇಡಿಕೆ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 4ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ರೈತರು ಹಾಗೂ ಹಾಲು ಒಕ್ಕೂಟಗಳ ಮನವಿಯನ್ನು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇನ್ನೂ ಒಂದೇ ವರ್ಷದಲ್ಲಿ ಎರಡು ಬಾರಿಗೆ ಹಾಲಿನದ ಏರಿಕೆ ಮಾಡಿದಂತಾಗಿದೆ. ಇದೇ ಫೆಬ್ರವರಿಯಲ್ಲಿ ಪ್ರತಿ ಲೀಟರ್‌ಗೆ 2 ರೂ ಏರಿಕೆ ಮಾಡಲಾಗಿತ್ತು. ಇದೀಗ ಪ್ರತಿ ಲೀಟರ್‌ಗೆ ಬರೋಬ್ಬರಿ ನಾಲ್ಕು ರೂಪಾಯಿ ಏರಿಕೆ ಮಾಡಲಾಗಿದ್ದು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ರಾಜ್ಯದ ಜನರಿಗೆ ಹಾಲಿನ ದರ ಏರಿಕೆ ಮಾಡುವ ಮೂಲಕ ಮತ್ತೆ ಬೆಲೆ ಏರಿಕೆಯ ಬರೆ ಹಾಕಿದೆ.
ಬಹುದಿನಗಳಿಂದ ರೈತರು ಹಾಗೂ ಹಾಲು ಒಕ್ಕೂಟಗಳ ಒತ್ತಡದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಯ ಪ್ರಸ್ತಾಪ ಕೇಳಿಬಂದಿತ್ತು. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಾಲಿ ದರ ಏರಿಕೆಯಾದರೆ, ಆ ಹಣ ರೈತರಿಗೆ ಸಿಗಲಿದೆ ಎಂದು ಚರ್ಚೆಯಾಗಿತ್ತು. ಅಲ್ಲದೇ ದರ ಹೆಚ್ಚಳದ ಸಾಧಕ, ಭಾದಕಗಳ ಬಗ್ಗೆ ಚರ್ಚೆ ನಡೆದಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.ಇನ್ನೂ ಸಿಎಂ ಜೊತೆಗಿನ ಸಭೆ ಬಳಿಕ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ದರ ಏರಿಕೆಯ ಶಾಕ್ ನೀಡಿದ್ದರು. ಇದರ ಬೆನ್ನಲ್ಲೇ ಇಂದು ನಡೆದ ಸಚಿವ ಸಂಪುಟ ಸಭೆಯಯಲ್ಲಿ ನಂದಿನ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ನೂತನ ಪರಿಷ್ಕೃತ ದರಪಟ್ಟಿ ಹೀಗಿದೆ. ನೀಲಿ ಪ್ಯಾಕೇಟ್ ಹಾಲಿನ ದರ 44 ರೂಪಾಯಿಯಿಂದ 48 ರೂಪಾಯಿಗೆ ಏರಿಕೆ. ಆರೇಂಜ್ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.54 ರಿಂದ 58 ರೂಗೆ ಏರಿಕೆ. ಸಮೃದ್ಧಿ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.56 ರಿಂದ 60ಕ್ಕೆ ಏರಿಕೆ. ಗ್ರೀನ್ ಸ್ಪೆಷಲ್ ಹಾಲಿನ ದರ ರೂ.54 ರಿಂದ 58ಕ್ಕೆ ಏರಿಕೆ. ನಾರ್ಮಲ್ ಗ್ರೀನ್ ಹಾಲಿನ ದರ ರೂ.52ರಿಂದ 56 ರೂಪಾಯಿಗೆ ಹೆಚ್ಚಳ ಆಗಲಿದೆ.