image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಎಲ್ಲಾ ನ್ಯಾಯಾಲಯದ ಪ್ರಕರಣಗಳನ್ನು ಘೋಷಿಸಬೇಕು - ಹೈಕೋರ್ಟ್

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಎಲ್ಲಾ ನ್ಯಾಯಾಲಯದ ಪ್ರಕರಣಗಳನ್ನು ಘೋಷಿಸಬೇಕು - ಹೈಕೋರ್ಟ್

ಬೆಂಗಳೂರು: ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಸಿವಿಲ್‌ ನ್ಯಾಯಾಲಯ, ಅರೆ ನ್ಯಾಯಾಧೀಕರಣ, ಆಡಳಿತಾತ್ಮಕ ಪ್ರಾಧಿಕಾರಗಳಲ್ಲಿ ಬಾಕಿಯಿರುವ ಪ್ರಕರಣಗಳು, ಜಾತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಪ್ರಶ್ನಿಸಿರುವುದು ಸೇರಿದಂತೆ ಎಲ್ಲ ಅಂಶಗಳನ್ನು ಘೋಷಿಸುವ ಅಗತ್ಯವಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೆ, ಪ್ರಜಾಪ್ರತಿನಿಧಿ ಕಾಯಿದೆ ಅಡಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಜಾತಿ ಮತ್ತು ಶಿಕ್ಷಣ ಪ್ರಮಾಣ ಪತ್ರಗಳ ಕುರಿತಂತೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕಾನೂನು ಆಯೋಗ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ ಔರಾದ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಅರ್ಜಿ ವಜಾಗೊಳಿಸಿ ನೋಟಿಸ್‌ ರದ್ದುಪಡಿಸಲು ನಿರಾಕರಿಸಿತು.

ನ್ಯಾಯಾಲಯ, ಅರೆ ನ್ಯಾಯಾಲಯ ಅಥವಾ ಆಡಳಿತಾತ್ಮಕ ಪ್ರಾಧಿಕಾರಗಳ ಮುಂದಿರುವ ಕ್ರಿಮಿನಲ್‌ ಮತ್ತು ಸಿವಿಲ್ ವ್ಯಾಜ್ಯಗಳ ಕುರಿತಂತೆ ಅಭ್ಯರ್ಥಿಗಳು ಎಲ್ಲ ರೀತಿಯ ಮಾಹಿತಿಯನ್ನು ಒದಗಿಸಬೇಕು. ಇದಕ್ಕಾಗಿ ಸೂಕ್ತ ಮಾರ್ಗಸೂಚಿಗಳನ್ನು ಸಿದ್ದಪಡಿಸುವುದು ಸರ್ಕಾರದ ಕೆಲಸ. ಈ ಮಾಹಿತಿ ಲಭ್ಯವಾದಲ್ಲಿ ಜನರನ್ನು ಪ್ರತಿನಿಧಿಸುವ ಜನಪ್ರತಿನಿಧಿಯ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಹಿಂದೆ ಇದೇ ರೀತಿಯ ಅರ್ಜಿಗಳು ತಿರಸ್ಕರಿಸಲಾಗಿದೆ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಈ ಹಿಂದೆ ಅರ್ಜಿಗಳು ತಿರಸ್ಕಾರಗೊಂಡಿರುವ ಸಂಬಂಧ ದೂರುದಾರ ನರಸಿಂಗ ಅವರಿಗೆ ಮಾಹಿತಿ ಇರಲಿಲ್ಲ. ಜೊತೆಗೆ, ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದೆ. ಆದರೆ, ಯಾವುದೇ ಮೆರಿಟ್(ಅರ್ಹತೆ) ಮೇಲೆ ನಿರ್ಧರಿಸಲಾಗಿಲ್ಲ ಎಂದು ತಿಳಿಸಿದೆ.

ಒಂದು ರಾಜ್ಯದಲ್ಲಿ ಜನಿಸಿ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಿ ನೆಲೆಸಿ ಆ ರಾಜ್ಯದಲ್ಲಿ ಅವರ ಜಾತಿಯ ಕುರಿತ ಅಧಿಸೂಚನೆ ಹೊರಡಿಸಿರುವುದು ಅನ್ವಯವಾಗುವುದಿಲ್ಲ ಎಂಬುದರ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳನ್ನು ನ್ಯಾಯಪೀಠ ಉಲ್ಲೇಖಿಸಿದೆ. ಅರ್ಜಿದಾರ ಚವ್ಹಾಣ್‌ ಅವರು ಕರ್ನಾಟಕದಲ್ಲಿ ಜನಿಸಿರುವುದಾಗಿ ತಿಳಿಸಿದ್ದಾರೆ. ಈ ಅಂಶವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯೇ ನಿರ್ಧರಿಸಬೇಕು. ಈ ವಿವಾದವನ್ನು ನ್ಯಾಯಾಲಯಗಳು ನಿರ್ಣಯ ಕೈಗೊಳ್ಳಲು ಅವಕಾಶವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

Category
ಕರಾವಳಿ ತರಂಗಿಣಿ