image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ 35 ಪಾಲಿಕೆ ಸದಸ್ಯರನ್ನು ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತರ ಆದೇಶ

ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ 35 ಪಾಲಿಕೆ ಸದಸ್ಯರನ್ನು ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತರ ಆದೇಶ

ವಿಜಯಪುರ: ಆಸ್ತಿ ಘೋಷಣಾ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ 35 ಪಾಲಿಕೆ ಸದಸ್ಯರನ್ನು ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಅಕ್ಟೋಬರ್ 2022ರಲ್ಲಿ 35 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. 35 ವಾರ್ಡ್‌ಗಳ​ ಪೈಕಿ ಬಿಜೆಪಿ 17, ಕಾಂಗ್ರೆಸ್ 10, ಎಐಎಂಐಎಂ 2, ಜೆಡಿಎಸ್-1, ಪಕ್ಷೇತರ-5 ಸದಸ್ಯರು ಆಯ್ಕೆಯಾಗಿದ್ದರು. ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಗೆದ್ದು ಬಂದರೂ ಅಧಿಕಾರ ಭಾಗ್ಯ ಮೊದಲ ಅವಧಿಗೆ ಸಿಗಲಿಲ್ಲ.

ಮೇಯರ್​, ಉಪಮೇಯರ್ ಮೀಸಲಾತಿ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ ಪರಿಣಾಮ, ಚುನಾವಣೆ ನಡೆದು 14 ತಿಂಗಳ ಬಳಿಕ ಮೇಯರ್, ಉಪಮೇಯರ್​ ಚುನಾವಣೆ ನಡೆಯಿತು. ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆ ಬಳಿಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​​ ಗೆದ್ದು ಸಚಿವ ಎಂ.ಬಿ.ಪಾಟೀಲ್​ ಮೇಲುಗೈ ಸಾಧಿಸಿದ್ದರು. ಇದರೊಂದಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಅವರಿಗೆ ಹಿನ್ನಡೆಯಾಗಿತ್ತು.

2024 ಜನವರಿ 9ರಂದು ಕಾಂಗ್ರೆಸ್​ನ ಮೆಹಜಬೀನ್ ಹೊರ್ತಿ ಮೇಯರ್ ಆಗಿಯೂ, ದಿನೇಶ್ ಹಳ್ಳಿ ಉಪಮೇಯರ್ ಆಗಿಯೂ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು. ಒಂದು ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದ್ದು, ಎರಡನೇ ಅವಧಿಗೆ ಮೀಸಲಾತಿಯಂತೆ ಮತ್ತೆ ಮೇಯರ್, ಉಪಮೇಯರ್ ಚುನಾವಣೆ ಜನವರಿ 27, 2025ರಂದು ನಡೆಯಿತು. ಆಗ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾಬಲ ಹೆಚ್ಚಿಸಲು ಅನಧಿಕೃತ ಮತದಾರರ ಸೇರ್ಪಡೆ ಮಾಡಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಬಿಜೆಪಿ ಸದಸ್ಯ ಕಿರಣ್ ಪಾಟೀಲ್ ರಿಟ್ ಸಲ್ಲಿಸಿದ್ದರು‌.

ಮೈನುದ್ದೀನ್ ಬೀಳಗಿ ಹಾಗೂ ಪ್ರಕಾಶ್ ಮಿರ್ಜಿ ಸೇರಿ ಪಾಲಿಕೆಯ ಎಲ್ಲಾ ಸದಸ್ಯರು ಪೌರಾಡಳಿತ ನಿಯಮಾವಳಿಯಂತೆ ನಿಗದಿತ ನಮೂನೆಯಲ್ಲಿ ಆಸ್ತಿ ವಿವರ ಸಲ್ಲಿಸಿಲ್ಲ. ಹಾಗಾಗಿ ಅವರ ಸದಸ್ಯತ್ವ ಅನರ್ಹಗೊಳಿಸಬೇಕೆಂದು ರಿಟ್ ಅರ್ಜಿ ಸಲ್ಲಿಸಿದ್ದರು. ಎರಡು ಅರ್ಜಿಗಳನ್ನು ಹೈಕೋರ್ಟ್ ಪೀಠ ಆಲಿಸಿ ಮೇಯರ್, ಉಪಮೇಯರ್ ಚುನಾವಣೆ ಪೂರ್ಣಗೊಳಿಸಿ, ಸದಸ್ಯತ್ವ ಅನರ್ಹತೆಯ ಕ್ರಮ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೈಕೋರ್ಟ್ ಹೇಳಿತ್ತು. ನಂತರದಲ್ಲಿ ಮೇಯರ್ ಆಗಿ ಎಂ.ಎಸ್.ಕರಡಿ, ಉಪಮೇಯರ್ ಬಿಜೆಪಿ ಬೆಂಬಲ ಸುಮಿತ್ರಾ ಜಾಧವ್ ಆಯ್ಕೆಯಾದರು.

2025 ಮಾರ್ಚ್ 25ಕ್ಕೆ ವಿಜಯಪುರ ಮಹಾನಗರ ಪಾಲಿಕೆ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ ಎನ್ನುವ ಬಗ್ಗೆ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಕೆಗೆ ಹೈಕೋರ್ಟ್ ದಿನಾಂಕ ನಿಗದಿಗೊಳಿಸಿತು. ಹೀಗಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್​.ಬಿ.ಶೆಟ್ಟೆಣ್ಣವರ್​ ಪಾಲಿಕೆಯ 35 ಸದಸ್ಯರನ್ನು ಅನರ್ಹಗೊಳಿಸಿದ್ದಾರೆ.

Category
ಕರಾವಳಿ ತರಂಗಿಣಿ