ಬಳ್ಳಾರಿ: ಕೃಷಿ, ಕುಡಿಯುವ ನೀರಿಗೆ ಆಧಾರವಾಗಿರುವ ಹಗರಿ ನದಿಯೊಡಲು ಬೇಸಿಗೆಯ ಆರಂಭದಲ್ಲಿಯೇ ಒಣಗಿದೆ. ಹಗರಿ ಎಂದೇ ಜನಸಾಮಾನ್ಯರು ಕರೆಯುವ ವೇದಾವತಿ ನದಿ ನಂಬಿಕೊಂಡಿರುವ ರೈತರಿಗೀಗ ಸಂಕಷ್ಟದ ಪರಿಸ್ಥಿತಿ.
ಸಿರುಗುಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳ ಸಾರ್ವಜನಿಕರು ಕುಡಿಯುವ ನೀರು ಹಾಗೂ ತಮ್ಮ ಜಾನುವಾರುಗಳ ಅವಶ್ಯಕತೆಗೆ ಹಗರಿ ನದಿಯನ್ನು ಅವಲಂಬಿಸಿದ್ದಾರೆ. ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಈ ನೀರನ್ನೇ ನೆಚ್ಚಿಕೊಂಡಿದ್ದಾರೆ. ಬೇಸಿಗೆಯ ಆರಂಭದಲ್ಲಿಯೇ ಹಗರಿ ಒಡಲು ಬತ್ತಿ ಹೋಗಿರುವುದರಿಂದ ಮುಂದೇನು ಎಂದು ರೈತರು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಜನರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಹಗರಿ ನದಿ ನೀರಿನ ಭರವಸೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿಯೇ ಈ ಭಾಗದ ರೈತರು ಭತ್ತ ನಾಟಿ ಮಾಡಿದ್ದರು. ತೆನೆ ಬಿಚ್ಚಿ ಕಾಳು ಕಟ್ಟುವ ಹಂತದಲ್ಲಿರುವ ಬೆಳೆಗೆ ಈಗ ನೀರು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಹಗರಿ ಖಾಲಿ ಖಾಲಿಯಾಗಿದೆ. ನೀರಿಲ್ಲದೇ ಗದ್ದೆಗಳು ಒಣಗಿವೆ. ಇನ್ನೂ ಮೂರು ನಾಲ್ಕು ದಿನಗಳಲ್ಲಿ ಭತ್ತಕ್ಕೆ ನೀರು ಹರಿಯದಿದ್ದರೆ, ಬೆಳೆ ಹಾಳಾಗುತ್ತವೆ ಎಂಬುದು ರೈತರ ಅಳಲು.
ಬೋರ್‌ವೆಲ್ ಕೊರೆಸಲು ಮುಂದಾದರೂ ಸಿಗದ ನೀರು: ಬೆಳೆದು ನಿಂತ ಬೆಳೆಗೆ ನೀರು ಅಗತ್ಯವಿರುವ ಕಾರಣ, ಬತ್ತಿ ಹೋಗಿರುವ ಹಗರಿ ಒಡಲಿನಲ್ಲಿ ನೆಲ ಕೊರೆದು ಪಂಪ್‌ಸೆಟ್ ಇಟ್ಟು ಕೊಳವೆ ಮೂಲಕ ನೀರು ಹೊರತೆಗೆಯುವ ಪ್ರಯತ್ನವನ್ನು ಕೆಲವು ರೈತರು ಮಾಡುತ್ತಿದ್ದಾರೆ. ಆದರೆ ಏನೇ ಹಳ್ಳ ತೆಗೆದು, ಪಂಪ್‌ಸೆಟ್ ಅಳವಡಿಸಿದರೂ ನೀರು ಮಾತ್ರ ಸಿಗುತ್ತಿಲ್ಲ.
ಕಳೆದ ಡಿಸೆಂಬರ್‌ನಲ್ಲಿ ನಾಟಿ ಮಾಡಿದ್ದ ಈ ಭತ್ತದ ಬೆಳೆಗೆ ಇದುವರೆಗೂ ಪ್ರತಿ ಎಕರೆಗೆ 40 ಸಾವಿರ ರೂ.ಗೂ ಹೆಚ್ಚು ಖರ್ಚಾಗಿದೆ. ಟಿಬಿ ಡ್ಯಾಂ ಎಲ್‌ಎಲ್‌ಸಿ ಕಾಲುವೆ ಮೂಲಕ ನದಿಗೆ ನೀರು ಹರಿಸಿದರೆ ಮಾತ್ರ ಬೆಳೆ, ಜನ, ಜಾನುವಾರು ಉಳಿಯುತ್ತವೆ. ಇಲ್ಲದಿದ್ದರೆ ಮುಂದಿನ ದಿನಗಳು ಕಷ್ಟಕರವೇ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ನೆರವಿಗೆ ಬರಬೇಕು ಎಂಬುದು ರೈತರ ಕೋರಿಕೆ.