ಬೆಂಗಳೂರು: ಕಾವೇರಿ ಮಾತೆಗೆ ನಮನ ಸಲ್ಲಿಸುವ ವೈಭವದ 'ಕಾವೇರಿ ಆರತಿ' ಸಮಾರಂಭ ಪೂರ್ಣಗೊಳ್ಳುತ್ತಿದ್ದಂತೆಯೇ ಸ್ಯಾಂಕಿ ಕೆರೆ ಮತ್ತು ಸುತ್ತಮುತ್ತಲ ಪ್ರದೇಶವನ್ನು ಬೆಂಗಳೂರು ಜಲಮಂಡಳಿ ಸಿಬ್ಬಂದಿ ಕ್ಷಣ ಮಾತ್ರವೂ ತಡಮಾಡದೇ ರಾತ್ರೋ ರಾತ್ರಿ ಸ್ವಚ್ಛಗೊಳಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಡಾ. ರಾಮಪ್ರಸಾತ್ ಮನೋಹರ್ ಸೇರಿದಂತೆ ಬಿಡಬ್ಲ್ಯುಎಸ್ಎಸ್ಬಿ ಸಿಬ್ಬಂದಿ ನಿನ್ನೆ ರಾತ್ರಿಯೇ ಸಮಾರಂಭದ ಬಳಿಕ (10 ಗಂಟೆ ಬಳಿಕ) ಮನೆಗೆ ತೆರಳದೇ ಕಾವೇರಿ ಆರತಿ ಸಮಾರಂಭದಿಂದ ಹರಡಿದ್ದ ಕಸವನ್ನು ಗುಡಿಸಿ, ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ. ಸ್ಯಾಂಕಿ ಕೆರೆಯಲ್ಲಿ ಐತಿಹಾಸಿಕವಾದ ''ಕಾವೇರಿ ಆರತಿ" ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪರಿಸರಕ್ಕೆ ಪೂರಕವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಕಾವೇರಿ ಆರತಿ ಸಮಾರಂಭ ಬಳಿಕ ಸಾರ್ವಜನಿಕರೆಲ್ಲ ಸ್ಥಳದಿಂದ ನಿರ್ಗಮಿಸಿದ ನಂತರ ರಾತ್ರಿ 10.30 ಕ್ಕೆ ಪ್ರಾರಂಭವಾದ ಈ ಸ್ವಚ್ಛತಾ ಕಾರ್ಯ ಬೆಳಗಿನ ಜಾವ 3 ಗಂಟೆಗಳವರೆಗೂ ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಹೊರತಾಗಿಯೂ ತಮ್ಮ ಆಯಾಸದ ನಡುವೆಯೇ, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಸ್ವತಃ ತಾವೇ ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಸಿಬ್ಬಂದಿಗೆ ಪ್ರೋತ್ಸಾಹಿಸಿ, ಸ್ಯಾಂಕಿ ಕೆರೆಯ ಆವರಣ ಸ್ವಚ್ಛವಾಗಿ ಬೆಳಗಿನ ವಾಯುವಿಹಾರಕ್ಕೆ ಸಿದ್ಧವಾಗಿರುವಂತೆ ಮಾಡುವಲ್ಲಿ ಯಶಸ್ವಿಯಾದರು.
''ಜಲಮೂಲಗಳ ಸಂರಕ್ಷಣೆ ನಮ್ಮ ಜಾಗೃತಿ ಅಭಿಯಾನದ ಪ್ರಮುಖ ಉದ್ದೇಶ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಈ ಪ್ರದೇಶವನ್ನು ಸ್ವಚ್ಛಗೊಳಿಸುವುದು ನಮ್ಮ ಕರ್ತವ್ಯವಾಗಿತ್ತು. ಈ ನಿಟ್ಟಿನಲ್ಲಿ ಸ್ಯಾಂಕಿ ಕೆರೆಯ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಕಸದ ಬುಟ್ಟಿಗಳನ್ನು ಇಡಲಾಗಿತ್ತು. ಕೆರೆಯ ಆವರಣ ಅಷ್ಟೇ ಅಲ್ಲದೇ ಸುತ್ತಲಿನ ರಸ್ತೆಗಳನ್ನು ಸಹ ಸ್ವಚ್ಛಗೊಳಿಸಲಾಯಿತು. ಈ ಕಾರ್ಯದಲ್ಲಿ ಜಲಮಂಡಳಿ ಸಿಬ್ಬಂದಿ, ಬಿಬಿಎಂಪಿ ಸ್ವಚ್ಛತಾ ಕಾರ್ಮಿಕರು ಪಾಲ್ಗೊಳ್ಳುವ ಮೂಲಕ ಇದನ್ನ ಸಾಧ್ಯವಾಗಿಸಿದ್ದಾರೆ'' ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಾವೇರಿ ಆರತಿ ಸಮಾರಂಭದ ಯಶಸ್ಸಿಗೆ ಕಾರಣಕರ್ತರಾದ ಸಾರ್ವಜನಿಕರಿಗೆ ಜಲಮಂಡಳಿ ಕೃತಜ್ಞತೆಗಳನ್ನು ಸಲ್ಲಿಸಿದೆ. ನೀರಿನ ಹಾಗೂ ಜಲಮೂಲಗಳ ಸಂರಕ್ಷಣೆಗೆ ಪಣತೊಡುವ ಮೂಲಕ ನಿಸರ್ಗದ ಅಮೂಲ್ಯ ಸಂಪತ್ತಿನ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಲಮಂಡಳಿ ಜೊತೆಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಮುಂಜಾನೆ ವಾಯುವಿಹಾರಕ್ಕೆ ಬಂದಂತಹ ಹಲವರು ತ್ವರಿತಗತಿಯಲ್ಲಿ ಸ್ಯಾಂಕಿ ಕೆರೆಯು ಸುಂದರವಾಗಿ ಕಂಗೊಳಿಸುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾದರು. ಹಾಗೆಯೇ ಜಲಮಂಡಳಿಯ ಈ ಕಾರ್ಯವನ್ನು ಮನಸಾರೆ ಶ್ಲಾಘಿಸಿದ್ದಾರೆ.