ಬೆಂಗಳೂರು: ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ನಿಯಮಗಳು ಉಲ್ಲಂಘನೆಯಾಗದಂತೆ ಬೆಂಗಳೂರು ನಗರದ ಸ್ಯಾಂಕಿ ಟ್ಯಾಂಕ್ನ ಬಫರ್ ಝೋನ್ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಹೈಕೋರ್ಟ್ ಅನುಮತಿ ನೀಡಿದೆ.
ನಗರದ ಕೆರೆಗಳ ಸಂರಕ್ಷಣೆ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಗೀತಾ ಮಿಶ್ರಾ ಎಂಬವರು ಸಲ್ಲಿಸಿದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಕಾನೂನಿನಲ್ಲಿನ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಕಾಪಾಡಬೇಕು. ಜೊತೆಗೆ, ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಕಾವೇರಿ ಆರತಿ ಕಾಯಕ್ರಮ ಸಾಂಸ್ಕೃತಿಕವಾಗಿದ್ದು, ಯಾವುದೇ ರೀತಿಯಲ್ಲಿಯೂ ವಾಣಿಜ್ಯ ಚಟುವಟಿಕೆ ಅಲ್ಲ. ಈ ಸಂದರ್ಭದಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳು, ಆಹಾರ ಪದಾರ್ಥಗಳ ಮಾರಾಟ ಮಾಡುವುದಿಲ್ಲ. ಈ ರೀತಿಯ ಆರತಿಯನ್ನು ಈ ಹಿಂದೆಯೂ ಇದೇ ಕೆರೆಯಲ್ಲಿ ಆಯೋಜಿಸಲಾಗಿದ್ದು, ಇದು ಮೊದಲ ಬಾರಿಗೆ ಮಾಡಿರುವುದಲ್ಲ ಎಂಬುದಾಗಿ ಸರ್ಕಾರ ಮತ್ತು ಜಲ ಮಂಡಳಿ ವಕೀಲರು ಭರವಸೆ ನೀಡಿದ್ದಾರೆ. ಅದರಂತೆ ಅನುಮತಿ ನೀಡುತ್ತಿರುವುದಾಗಿ ಪೀಠ ಹೇಳಿದೆ.
ಕೆರೆಗಳ ಸಂರಕ್ಷಣೆಗೆ ಪ್ರೋತ್ಸಾಹಿಸುವುದು ಮತ್ತು ಅಭಿವೃದ್ಧಿ ಸಾರ್ವಜನಿಕ ಜಾಗೃತಿ ಮೂಡಿಸುವುದಕ್ಕೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯಲ್ಲಿ ಅವಕಾಶವಿದೆ ಎಂಬುದಾಗಿ ಜಲಮಂಡಳಿ ಪರ ವಕೀಲರ ವಾದ ಪುರಸ್ಕರಿಸಿದ ಪೀಠ, ಕಾಯಿದೆಯಲ್ಲಿ ವಿವರಿಸಿರುವಂತೆ ಕೆರೆಗಳ ಸಂರಕ್ಷಣೆಗೆ ವಿರುದ್ಧವಾಗಿರುವಂತಹ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಿ ಆದೇಶಿಸಿತು.
ಇದೇ ಸಂದರ್ಭದಲ್ಲಿ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಮನವಿ ಮಾಡದೆ, ವಾದ ಅಂಶಗಳನ್ನೂ ನೀಡದೆ ಕಾವೇರಿ ಆರತಿ ಆಯೋಜನೆ ಮಾಡುತ್ತಿದ್ದ ಬೆಂಗಳೂರು ಜಲ ಮಂಡಳಿಯನ್ನು ಪ್ರತಿವಾದಿಯನ್ನಾಗಿಸದೆ, ಅರ್ಜಿಯ ಪ್ರತಿಯನ್ನೂ ನೀಡದ ಅರ್ಜಿದಾರರ ಪರ ವಕೀಲರ ಕ್ರಮಕ್ಕೆ ನ್ಯಾಯಪೀಠ ತೀವ್ರ ತೀವ್ರ ಸಮಾಧಾನ ವ್ಯಕ್ತಪಡಿಸಿತು.