ಬೆಂಗಳೂರು: "ನಾವು ಈ ದೇಶದ ನಾಗರಿಕರಲ್ವಾ? ಸಮಾಜದ ಭಾಗ ಅಲ್ವಾ?. ಮುಸಲ್ಮಾನರು ಪ್ರಾಣಿಗಳು, ಸಮಾಜದಲ್ಲಿ ಬದುಕಲು ಯೋಗ್ಯರಲ್ಲ, ನಮ್ಮ ಅಸ್ತಿತ್ವ ಇಲ್ಲ ಅಂತ ಘೋಷಣೆ ಮಾಡಲಿ" ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, "ಬಜೆಟ್ ಬಗ್ಗೆ ಬಹಳಷ್ಟು ಜನ ಪರವಾಗಿ ಮಾತನಾಡಿದರು. ಆದರೆ ವಿರೋಧ ಪಕ್ಷದವರು ಈ ಬಜೆಟ್ ಅನ್ನು ಮುಸ್ಲಿಂ ಬಜೆಟ್, ತುಷ್ಠೀಕರಣದ ಬಜೆಟ್, ಹಲಾಲ್ ಬಜೆಟ್ ಮತ್ತು ಮುಸ್ಲಿಂ ಲೀಗ್ ಬಜೆಟ್ ಅಂತಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಸಲ್ಮಾನರು ನ್ಯಾಯಯುತ ತೆರಿಗೆ ಕಟ್ತಿಲ್ವಾ? ಬೊಕ್ಕಸಕ್ಕೆ ನಮ್ಮ ತೆರಿಗೆ ಹೋಗ್ತಿಲ್ವಾ, ನಮಗೆ ಅಧಿಕಾರ ಇಲ್ವಾ?. ಇಲ್ಲಾಂದ್ರೆ ನಾವು ಮನುಷ್ಯರು ಅಲ್ಲ ಅಂತ ಘೋಷಣೆ ಮಾಡಿ, ಮುಸಲ್ಮಾನರು ಪ್ರಾಣಿಗಳು, ಸಮಾಜದಲ್ಲಿ ಬದುಕಲು ಯೋಗ್ಯರಲ್ಲ, ನಮ್ಮ ಅಸ್ತಿತ್ವ ಇಲ್ಲ ಅಂತ ಘೋಷಿಸಲಿ. ನಮಗೆ ನೋವಾಗುತ್ತದೆ" ಎಂದರು. "ನಾವು ಎಲ್ಲಿಂದಲೋ ಬಂದವರಲ್ಲ. ನಮ್ಮನ್ನೂ ಕೂಡ ನಿಮ್ಮ ಸಹೋದರರು ಅಂತ ತಿಳಿದುಕೊಳ್ಳಿ. ನಾವು ಈ ದೇಶದ ಜನ, ಇದೇ ಮಣ್ಣಿನ ಮಕ್ಕಳು. ಇದೇ ಹಿಂದುಳಿದ ವರ್ಗದಿಂದ, ಇದೇ ದಲಿತರಿಂದ ಯಾವಾಗಲೋ ಕನ್ವರ್ಟ್ ಆಗಿರಬಹುದು. ಅದನ್ನು ತಿಳಿದುಕೊಂಡರೂ ನಮ್ಮ ಜೊತೆ ಸಹಾನುಭೂತಿ ಇಲ್ಲವಲ್ಲ" ಎಂದು ಬಿಜೆಪಿ ಸದಸ್ಯರಿಗೆ ರಿಜ್ವಾನ್ ಅರ್ಷದ್ ಕೇಳಿದರು.
ಆಗ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್, "ಕಲ್ಲು ಹೊಡೆಯೋರು ನಿಮ್ಮವರು. ಜಗಳ ಮಾಡೋರು ನಿಮ್ಮವರು. ಪಾಕಿಸ್ತಾನದಿಂದ ಹಿಂದುಗಳನ್ನು ಓಡಿಸಿದ್ದು ನಿಮ್ಮವರು" ಎಂದು ಕುಟುಕಿದರು. ಈ ವೇಳೆ ಕಲಾಪದಲ್ಲಿ ಭಾರೀ ಗದ್ದಲ ಉಂಟಾಯಿತು. ಮಾತು ಮುಂದುವರಿಸಿದ ರಿಜ್ವಾನ್ ಅರ್ಷದ್, "ಮುಸ್ಲಿಮ ಯುವಕರು ಒಂದು ಕೈಯಲ್ಲಿ ಕುರಾನ್ ಇನ್ನೊಂದು ಕೈಯಲ್ಲಿ ಕಂಪ್ಯೂಟರ್ ಹಿಡಿಯಬೇಕು ಅಂತಾ ಮೋದಿ ಅವರು ಹೇಳಿದ್ದಾರೆ" ಎಂದರು. ರಿಜ್ವಾನ್ ಮಾತಿಗೆ ಆಕ್ಷೇಪಿಸಿದ ಯತ್ನಾಳ್, "ಕಂಪ್ಯೂಟರ್ ಕೈಯಲ್ಲಿ ಎಕೆ47 ಹಿಡ್ಕೊಳ್ತಿದ್ದಾರಲ್ಲ" ಅಂತ ಪ್ರತಿಕ್ರಿಯೆ ನೀಡಿದರು. ಈ ವೇಳೆ ಜಟಾಪಟಿ, ಮಾತಿನ ಚಕಮಕಿ ಉಂಟಾಯಿತು.
"ಮುಸ್ಲಿಂ ಬಜೆಟ್, ಹಲಾಲ್ ಬಜೆಟ್, ಮುಸ್ಲಿಂ ಲೀಗ್ ಬಜೆಟ್ ಅಂದ್ರು. ರಾಜ್ಯದ ಅಲ್ಪಸಂಖ್ಯಾತರ ಜನಸಂಖ್ಯೆ 16%. ಅಲ್ಪಸಂಖ್ಯಾತರಲ್ಲಿ ಮುಸಲ್ಮಾನರು ಹೆಚ್ಚಾಗಿದ್ದಾರೆ. 4.10 ಲಕ್ಷ ಕೋಟಿ ಬಜೆಟ್ನಲ್ಲಿ 4,100 ಕೋಟಿ ರೂ ಎಲ್ಲ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ, ಬರೀ ಮುಸಲ್ಮಾನರಿಗೇ ಕೊಟ್ಟಿಲ್ಲ" ಎಂದು ಶಾಸಕ ಅರ್ಷದ್ ತಿಳಿಸಿದರು.
ಕೇಂದ್ರ ಸಚಿವರಿಂದ ರಾಜ್ಯ ನಾಯಕರವರೆಗೂ ಎಲ್ಲರೂ ಹಲಾಲ್ ಬಜೆಟ್ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಇದರಿಂದ ಕೆಳಹಂತದಲ್ಲಿ ಏನು ಸಂದೇಶ ಹೋಗುತ್ತಿದೆ. ಮುಸಲ್ಮಾನರ ಬಗ್ಗೆ ನಮ್ಮ ಹಿಂದೂ ಸಹೋದರರು ಏನು ತಿಳಿದುಕೊಳ್ಳಬೇಕು. ಎಲ್ಲ ಬಜೆಟ್ ಅನ್ನೂ ಮುಸಲ್ಮಾನರು ಮನಗೆ ಒಯ್ದಿದ್ದಾರಾ? ಸರ್ಕಾರ ಎಲ್ಲವನ್ನೂ ಮುಸಲ್ಮಾನರಿಗೋಸ್ಕರ ಮೀಸಲಿಟ್ಟಿದೆಯಾ? ಈ ರೀತಿಯ ತಪ್ಪು ಸಂದೇಶ ಹೋದ್ರೆ ನಾಳೆ ಸಮಾಜವನ್ನು ಒಗ್ಗೂಡಿಸೋದು ಹೇಗೆ? ಈ ದೇಶ ಮುಂದೆ ಹೋಗಲು ನಾವು ಒಟ್ಟಾಗಿಯೇ ಬಾಳಬೇಕಲ್ವಾ? ಸಮಾಜವನ್ನು ಒಡೆದ್ರೆ ಈ ದೇಶ ಪ್ರಗತಿ ಮಾಡಲು ಸಾಧ್ಯನಾ? ಈ ರೀತಿಯ ಹೇಳಿಕೆಗಳಿಂದ ಸಮಾಜದಲ್ಲಿ ವಿಷ ಬೀಜ ಬಿತ್ತಿ ಸಮಾಜದಲ್ಲಿ ಬೆಂಕಿ ಹಚ್ಚಿದರೆ ರಾಜ್ಯದ ಘಣತೆ ಏನಾಗುತ್ತದೆ. ಅಂತಾರಷ್ಟ್ರೀಯ ಮಟ್ಟದಲ್ಲಿ ಏನ್ ಸಂದೇಶ ಕಳಿಸ್ತೀವಿ. ದಯವಿಟ್ಟು ಹೀಗೆ ಮಾಡಬೇಡಿ. ನಮಗೆ ಸಿಕ್ಕಿರುವುದು 1%. ಅದನ್ನೂ ಕೂಡ ಈ ಮಟ್ಟದಲ್ಲಿ ಹೀನಾಯವಾಗಿ ನೋಡುವುದು ಬಿಡಿ ಎಂದು ಕೈಮುಗಿದು ಕೇಳಿಕೊಳ್ಳುವೆ ಎಂದು ರಿಜ್ವಾನ್ ಅರ್ಷದ್ ಮಾತನಾಡಿದರು.