ಬೆಂಗಳೂರು : ರಾಮನಗರ ಜಿಲ್ಲೆಯ ಹೆಸರನ್ನು ''ಬೆಂಗಳೂರು ದಕ್ಷಿಣ'' ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡುವುದು ಶತಸಿದ್ಧ, ರಾಮನಗರದ ಹೆಸರನ್ನು ಹೇಗೆ ಬದಲಾವಣೆ ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರಕಾರವು ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪವನ್ನು ತಡೆಹಿಡಿದಿರುವ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ಹೆಸರು ಬದಲಾವಣೆ ರಾಜ್ಯ ಸರಕಾರಕ್ಕೆ ಸಂಬಂದಪಟ್ಟ ವಿಚಾರವಾಗಿದೆ. ನಮಗೂ ಕಾನೂನು ಗೊತ್ತಿದೆ ಎಂದು ಹೇಳಿದ್ದಾರೆ.
ರಾಮನಗರ ಜಿಲ್ಲೆ ಹೆಸರು ಬದಲಾವಣೆಯನ್ನು ಕೆಂದ್ರ ತಿರಸ್ಕರಿಸಿರುವ ಬಗ್ಗೆ ಕೇಳಿದಾಗ, "ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ರಾಜ್ಯದ ವಿಚಾರ. ನಮಗೂ ಕಾನೂನು ಗೊತ್ತಿದೆ. ಇದನ್ನು ಹೇಗೆ ಜಾರಿಗೆ ತರಬೇಕು ಎಂಬುದು ನಮಗೆ ಗೊತ್ತಿದೆ" ಎಂದು ಹೇಳಿದರು.
"ಇಲ್ಲಿ ಒಂದಷ್ಟು ಸಚಿವರು ಇದ್ದಾರಲ್ಲ, ಅವರುಗಳು ಕೇಂದ್ರ ಗೃಹ ಸಚಿವರಿಗೆ ಹೇಳಿ ಹೆಸರು ಬದಲಾವಣೆ ಬೇಡ ಎಂದು ಬರೆಸಿದ್ದಾರೆ" ಎಂದರು. ಈ ವೇಳೆ ಕುಮಾರಸ್ವಾಮಿ ಅವರೇ ಎಂದು ಮರು ಪ್ರಶ್ನಿಸಿದಾಗ 'ಇನ್ನ್ಯಾರು' ಎಂದು ಹೆಸರು ಹೇಳದೆ ಛೇಡಿಸಿದರು. ಈ ವಿಚಾರವಾಗಿ ಎಲ್ಲಾ ಇಲಾಖೆಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದವು ಎಂದು ತಿಳಿಸಿದ ಡಿಸಿಎಂ, ಹಾಗೆ ನೋಡಿದರೆ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ಸರಕಾರದ ಅನುಮತಿಯ ಅವಶ್ಯಕತೆಯೇ ಇಲ್ಲವೆಂದು ತಿಳಿಸಿದರು.
ಇದು ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಪರೋಕ್ಷವಾಗಿ ಪ್ರಸ್ತಾಪಿಸಿದ ಸಿಎಂ, ಜನರ ಹೆಸರು ಬದಲಾವಣೆ ಮಾಡಿಕೊಳ್ಳುವಾಗ ಒಂದು ಅಫಿಡವಿಟ್ ಮಾಡಿಕೊಂಡು ಬದಲಾವಣೆ ಮಾಡಿಕೊಳ್ಳಬಹುದಾದರೆ ಒಂದು ಜಿಲ್ಲೆಯ ಹೆಸರು ಬದಲಾಯಿಸುವುದು ಕಷ್ಟವೇ? ಇದು ರಾಜ್ಯದ ವಿಷಯ. ದ್ವೇಷದ ರಾಜಕಾರಣ ಹೇಗೆ ನಡೆಯುತ್ತಿದೆ ಹಾಗೂ ರಾಮನಗರ ಜನತೆಯ ಮೇಲೆ ನಡೆಸುತ್ತಿರುವ ಗದಾಪ್ರಹಾರಕ್ಕೆ ಇದೆಲ್ಲಾ ಸಾಕ್ಷಿ" ಎಂದು ವ್ಯಂಗ್ಯವಾಡಿದರು.