ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ. ಇನ್ನು ಬಿಸಿಲನಾಡೆಂದೇ ಹೆಸರಾದ ಕೊಪ್ಪಳದಲ್ಲಿ ಸೂರ್ಯನ ಪ್ರಖರತೆಗೆ ಜನ ಹೈರಾಣಾಗುತ್ತಿದ್ದಾರೆ. ಅಧಿಕ ತಾಪದಿಂದ ಸಾರ್ವಜನಿಕರಿಗೆ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ.
ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ತಾಪಮಾನ 39 ಡಿಗ್ರಿಯವರೆಗೂ ತಲುಪಿದೆ. ಮುಂದಿನ ಒಂದು ವಾರದಲ್ಲಿ ಉಷ್ಣಾಂಶ ಇನ್ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಕ್ಕಳು, ವೃದ್ಧರಲ್ಲಿ ನಿರ್ಜಲೀಕರಣ, ಜ್ವರ, ಅತಿಸಾರ, ಶೀತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸೆಕೆಯ ಜೊತೆಗೆ ಬಿಸಿಗಾಳಿ ಅಧಿಕವಾಗಿ ಬೀಸುತ್ತಿದೆ. ಚರ್ಮ ರೋಗಗಳು ಕಾಣಿಸಿಕೊಳ್ಳುತ್ತಿವೆ. ಬಿಸಿಲಿನ ಹೊಡೆತದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಬಿಸಿನಲ್ಲಿ ಓಡಾಡದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
"ಜಿಲ್ಲಾ ಬೋಧಕ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲೇ ಪ್ರತ್ಯೇಕವಾಗಿ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಿಸಲಾಗಿದೆ. ಇದರಲ್ಲಿ ಹತ್ತು ಬೆಡ್‌ಗಳನ್ನು ಹಾಕಿದ್ದು, ಸೂರ್ಯಾಘಾತಕ್ಕೆ ತುತ್ತಾದವರ ನಿರ್ವಹಣೆಗೆ ಅಗತ್ಯ ಔಷಧಗಳನ್ನು ಸಂಗ್ರಹಿಸಿಡಲಾಗಿದೆ. ಇಲ್ಲಿಯವರೆಗೂ ಯಾರೊಬ್ಬರೂ ಸೂರ್ಯಾಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿಲ್ಲ. ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲಾಸ್ಪತ್ರೆಯಲ್ಲಿ ಇಂಥ ವಾರ್ಡ್ಗಳನ್ನು ತೆರೆಯಲಾಗಿದೆ" ಎಂದು ಕೊಪ್ಪಳ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಕೃಷ್ಣ ಓಂಕಾರ್ ತಿಳಿಸಿದರು.
"ಬಿಸಿಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಹೀಟ್ ಸ್ಟ್ರೋಕ್ ವಾರ್ಡ್ ಆರಂಭಿಸಿದೆ. ಸಮಸ್ಯೆ ಉಂಟಾದರೆ ಇಲ್ಲಿ ಚಿಕಿತ್ಸೆ ಪಡೆಯಬಹುದು. ಇದರೊಂದಿಗೆ ಜಿಲ್ಲಾಡಳಿತ ಬೇಸಿಗೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ" ಎಂದು ಕಿಮ್ಸ್ ನಾಮನಿರ್ದೇಶನ ಸದಸ್ಯ ಸಲೀಂ ಅಳವಂಡಿ ಹೇಳಿದರು.